IND U19 vs SL U19: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ ಯುವ ಪಡೆ – Kannada News | India U19 Dominates Sri Lanka, Secures Unofficial Test Series Win by 211 Runs

ಭಾರತ ಹಾಗೂ ಶ್ರೀಲಂಕಾ ಅಂಡರ್-19 ತಂಡಗಳ (India U19 vs Sri Lanka U19) ನಡುವೆ ನಡೆದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ಭಾರತ ಯುವ ಪಡೆ 1-0 ಅಂತರದಿಂದ ಗೆದ್ದುಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಹೀಗಾಗಿ ಎರಡನೇ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸರಣಿ ಕೈವಶವಾಗುತ್ತಿತ್ತು. ಅದರಂತೆ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಅಂಡರ್-19 ತಂಡವನ್ನು 211 ರನ್‌ಗಳಿಂದ ಸೋಲಿಸಿದ ಭಾರತ ಯುವ ಪಡೆ ಸರಣಿ ಎತ್ತಿ ಹಿಡಿದಿದೆ. ತಂಡದ ಈ ಗೆಲುವಿನಲ್ಲಿ ಮನಲ್ ಚೌಹಾಣ್, ಕುಶಾಗ್ರ ಓಜಾ ಮತ್ತು ಲಕ್ಷ್ಯ ರಾಜೇಶ್ ರಾಯ್‌ಚಂದಾನಿ ಅವರ ಶತಕಗಳ ಜೊತೆಗೆ ರೋಹಿತ್ ಯಾದವ್ ಮತ್ತು ಚಿಗುರುಪತಿ ವೆಂಕಟ್ ಅವರ ಅತ್ಯುತ್ತಮ ಬೌಲಿಂಗ್‌ ಪ್ರಮುಖ ಪಾತ್ರವಹಿಸಿತು.

260 ರನ್‌ಗಳಿಗೆ ಲಂಕಾ ಆಲೌಟ್

ಎರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 411 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 148 ರನ್‌ಗಳಿಗೆ ಆಲೌಟ್ ಆಯಿತು. 263 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡ 3 ವಿಕೆಟ್‌ಗಳಿಗೆ 208 ರನ್‌ಗಳನ್ನು ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. ಅಂತಿಮವಾಗಿ 472 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಗುವ ಮೂಲಕ 211 ರನ್​ಗಳ ಸೋಲನುಭವಿಸಿತು.

ರೋಹಿತ್ ಮಾರಕ ಬೌಲಿಂಗ್

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದ ರೋಹಿತ್ ಯಾದವ್ ಒಟ್ಟು 4 ವಿಕೆಟ್‌ಗಳನ್ನು ಪಡೆದರು. ಇವರ ಜೊತೆಗೆ ಚಿಗುರುಪತಿ ವೆಂಕಟ್ ಕೂಡ 3 ವಿಕೆಟ್‌ಗಳನ್ನು ಪಡೆದರು. ನಾಯಕ ಯಶವರ್ಧನ್, ಜಗನ್ನಾಥ್ ಮತ್ತು ಪ್ರಣವ್ ಕೂಡ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್​ನಲ್ಲಿ ರೋಹಿತ್ ಎರಡು ವಿಕೆಟ್‌ಗಳನ್ನು ಪಡೆದರೆ, ವೆಂಕಟ್ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆದರು. ಪ್ರಣವ್ ಮತ್ತು ಜಗನ್ನಾಥ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ರನ್​ಗಳ ಮಳೆ ಹರಿಸಿದ ಭಾರತ ಯುವ ಪಡೆ

ಇನ್ನು ಭಾರತ ಯುವ ಪಡೆಯ ಬ್ಯಾಟಿಂಗ್‌ ವಿಚಾರಕ್ಕೆ ಬರುವುದಾದರೆ.. ಕುಶಾಗ್ರ ಓಜಾ ಮೊದಲ ಇನ್ನಿಂಗ್ಸ್‌ನಲ್ಲಿ 111 ರನ್ ಗಳಿಸಿದರೆ, ಮನಲ್ ಚೌಹಾಣ್ 150 ರನ್ ಬಾರಿಸಿದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲಿ ಲಕ್ಷ್ಯ ಕೂಡ ಅದ್ಭುತ ಪ್ರದರ್ಶನ ನೀಡಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಮನಾಲ್ ಕೂಡ 46 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಏಳು ಬೌಂಡರಿಗಳನ್ನು ಒಳಗೊಂಡಂತೆ 51 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರ ಜೊತೆಗೆ ನಾಯಕ ಯಶವರ್ಧನ್ ಚೌಹಾಣ್ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 78 ರನ್ ಗಳಿಸಿ ಉಪಯುಕ್ತ ಇನ್ನಿಂಗ್ಸ್ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ ಸೆನುಜಾ ವೆಕುನಗೋಡ ಮತ್ತು ವಿಮತ್ ದಿನಸಾರ ತಲಾ 64 ರನ್ ಗಳಿಸಿದರೆ, ದುಲ್ನಿತ್ ಸಿಗೇರಾ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರ 31 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:00 pm, Thu, 23 July 26

Source link

Leave a Reply

Your email address will not be published. Required fields are marked *