Headlines

IND vs AFG: ಅರ್ಷದೀಪ್ ಮಾತು ಕೇಳದೆ ಕೆಟ್ಟ ಗಿಲ್; 48 ಎಸೆತಗಳಲ್ಲಿ ಶತಕ ಬಾರಿಸಿದ ಗುರ್ಬಾಜ್ – Kannada News | Rahmanullah Gurbaz Century vs India: Gill’s DRS Blunder Costs Dearly in Dharamshala ODI

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಮಳೆಯಿಂದ ತಡವಾಗಿ ಆರಂಭವಾದ ಪಂದ್ಯವನ್ನು ತಲಾ 25 ಓವರ್​ಗಳಿಗೆ ನಿಗದಿಪಡಿಸಲಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡದ ಪರ ಅನುಭವಿ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್‌ ಮೂಲಕ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ ಗುರ್ಬಾಜ್ ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಆದಾಗ್ಯೂ ರಹಮಾನುಲ್ಲಾ ಗುರ್ಬಾಜ್ ಅವರ ಈ ಶತಕದ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಮಾಡಿದ ಎಡವಟ್ಟು ಕೂಡ ಪ್ರಮುಖ ಪಾತ್ರವಹಿಸಿತು.

ವಾಸ್ತವವಾಗಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಅಫ್ಘಾನಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಕೇವಲ 16 ರನ್​ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಟೀಂ ಇಂಡಿಯಾ ಪರ ಪಾದಾರ್ಪಣೆಯ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ ತಾವು ಬೌಲ್ ಮಾಡಿದ ಮೊದಲ ಓವರ್​ನಲ್ಲೇ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಉರುಳಿಸಿದರು. ಆ ನಂತರ ಮೂರನೇ ಓವರ್​ನಲ್ಲಿ ದಾಳಿಗಿಳಿದ ಅರ್ಷದೀಪ್ ಸಿಂಗ್ ಓವರ್​ನ ಮೂರನೇ ಎಸೆತದಲ್ಲಿ ಸೆದಿಕುಲ್ಲಾ ಅಟಲ್ ಅವರ ವಿಕೆಟ್ ಉರುಳಿಸಿದರು. ಅದೇ ಓವರ್​ನಲ್ಲಿ ಮತ್ತೊಂದು ವಿಕೆಟ್ ಪಡೆಯುವ ಅವಕಾಶ ಟೀಂ ಇಂಡಿಯಾಕ್ಕಿತ್ತು. ಆದರೆ ನಾಯಕ ಶುಭ್​ಮನ್ ಗಿಲ್ ಮಾಡಿದ ಎಡವಟ್ಟು ತಂಡಕ್ಕೆ ತುಂಬಾ ದುಬಾರಿಯಾಯಿತು.

ಅರ್ಷದೀಪ್ ಸಿಂಗ್ ಎಸೆದ ಮೂರನೇ ಓವರ್​ನ 5ನೇ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್ ಪಡೆಯುವ ಅವಕಾಶವಿತ್ತು. ಅರ್ಷದೀಪ್ ಎಸೆದ 5ನೇ ಎಸೆತ ಗುರ್ಬಾಜ್ ಅವರ ಪ್ಯಾಡ್​ಗೆ ತಗುಲಿತು. ಕೂಡಲೇ ಅರ್ಷದೀಪ್ ವಿಕೆಟ್​ಗಾಗಿ ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಇತ್ತ ಅರ್ಷದೀಪ್ ಡಿಆರ್​ಎಸ್ ತೆಗೆದುಕೊಳ್ಳುವಂತೆ ನಾಯಕ ಗಿಲ್ ಬಳಿ ಮನವಿ ಮಾಡಿದರು. ಆದರೆ ಶುಭ್​ಮನ್ ಗಿಲ್ ಅರ್ಷದೀಪ್ ಸಿಂಗ್ ಮಾತು ಕೇಳದೆ ವಿಕೆಟ್ ಕೀಪರ್ ಇಶಾನ್ ಕಿಶನ್ ಹಾಗೂ ಅನುಭವಿ ರೋಹಿತ್ ಶರ್ಮಾ ಅವರ ಮಾತು ಕೇಳಿ ಡಿಆರ್​ಎಸ್ ತೆಗೆದುಕೊಳ್ಳಲಿಲ್ಲ. ಕಿಶನ್ ಹಾಗೂ ರೋಹಿತ್, ಚೆಂಡು ಬ್ಯಾಟ್​ಗೆ ತಾಗಿದೆ ಎಂದು ಸನ್ನೆ ಮಾಡಿದರು. ಇದರಿಂದ ಗಿಲ್ ಡಿಆರ್​ಎಸ್ ತೆಗೆದುಕೊಳ್ಳಲಿಲ್ಲ.

ಆದರೆ ಆ ನಂತರ ತೋರಿಸಿದ ರಿಪ್ಲೆಯಲ್ಲಿ ಚೆಂಡು ಪ್ಯಾಡ್​ಗೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ಇದನ್ನು ನೋಡಿದ ಅರ್ಷದೀಪ್ ಅಸಮಾಧಾನ ಹೊರಹಾಕಿದರು. ಆ ಸಮಯದಲ್ಲಿ ಗುರ್ಬಾಜ್ ಕೇವಲ 14 ರನ್ ಬಾರಿಸ ಆಡುತ್ತಿದ್ದರು. ಟೀಂ ಇಂಡಿಯಾ ಮಾಡಿದ ಎಡವಟ್ಟಿನಿಂದ ಜೀವದಾನ ಪಡೆದ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದರು. ಅಂದರೆ ಭಾರತ ತಂಡದ ಒಂದು ತಪ್ಪು ನಿರ್ಧಾರದಿಂದ 88 ರನ್​ಗಳ ದಂಡ ತೆರಬೇಕಾಯಿತು.

Source link

Leave a Reply

Your email address will not be published. Required fields are marked *