ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಸರಣಿ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಗಾಯದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿಯ ಈ ಅಲಭ್ಯತೆ ಏಕದಿನ ವಿಶ್ವಕಪ್ ತಯಾರಿಯ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕೊಹ್ಲಿ ಅವರ ಗಾಯವು ಗಂಭೀರವಾಗಿರುವ ಕಾರಣ ಅವರು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ದೃಢಪಡಿಸಿದೆ.
ಮಂಡಿರಜ್ಜು ಗಾಯಕ್ಕೆ ತುತ್ತಾದ ಕೊಹ್ಲಿ
2026 ರ ಐಪಿಎಲ್ನಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. 75 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಇದೇ ಪಂದ್ಯದಲ್ಲಿ ಕೊಹ್ಲಿ ಗಾಯಕ್ಕೆ ತುತ್ತಾಗಬೇಕಾಯಿತು. ಬ್ಯಾಟಿಂಗ್ ಮಾಡುವ ವೇಳೆ ಕೊಹ್ಲಿ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಪಂದ್ಯವನ್ನು ಹಲವಾರು ಬಾರಿ ನಿಲ್ಲಿಸಬೇಕಾಯಿತು. ಈ ನೋವಿನ ನಡುವೆಯೂ ಕ್ರೀಸ್ನಲ್ಲಿ ನೆಲೆ ನಿಂತಿದ್ದ ಕೊಹ್ಲಿ ಕೊನೆಯವರೆಗೂ ಉಳಿದು ತಂಡಕ್ಕೆ ಅಮೋಘ ಜಯ ತಂದುಕೊಟ್ಟಿದ್ದರು.
ಕೊಹ್ಲಿ ಬದಲು ಯಾರಿಗೆ ಸ್ಥಾನ?
ಕೊಹ್ಲಿಯ ಅಲಭ್ಯತೆಯಿಂದಾಗಿ ಜೂನ್ 13 ರಿಂದ ಪ್ರಾರಂಭವಾಗುವ ಏಕದಿನ ಸರಣಿಯಲ್ಲಿ ಅವರ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದು ಪ್ರಶ್ನೆಯಾಗಿದೆ. ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವುದರಿಂದ, ಇಶಾನ್ ಕಿಶನ್ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆಗಳಿವೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರಿಗೆ ಆಡುವ ಅವಕಾಶ ಸಿಗುವುದು ಭಾಗಶಃ ಖಚಿತವಾಗಿದೆ.
ಮಧ್ಯಮ ಕ್ರಮಾಂಕದಲ್ಲಿ ಯಾರ್ಯಾರು?
ಎಂದಿನಂತೆ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರೆ, ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅವರ ಅಲಭ್ಯತೆಯ ನಡುವೆ ಕಿಶನ್ ಆಡಬಹುದು. ಇದಾದ ಬಳಿಕ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ 4 ನೇ ಕ್ರಮಾಂಕದಲ್ಲಿ ಆಡಬಹುದು. ಹಾಗೆಯೇ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ 5 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆರನೇ ಸ್ಥಾನದಲ್ಲಿ ಆಡಿದರೆ, ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 7 ನೇ ಕ್ರಮಾಂಕದಲ್ಲಿ ಆಡಬಹುದು. ಸ್ಪಿನ್ ಬೌಲರ್ ಆಗಿ ಕುಲ್ದೀಪ್ ಯಾದವ್ ಆಡುವುದು ಖಚಿತವಾಗಿದ್ದು, ವೇಗದ ಬೌಲರ್ಗಳಾಗಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ಕಣಕ್ಕಿಳಿಯಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
