ಭಾರತ ಹಾಗೂ ಜಿಂಬಾಬ್ವೆ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಇದಾದ ಬಳಿಕ ಟೀಂ ಇಂಡಿಯಾ 2026 ರ ಏಷ್ಯನ್ ಕ್ರೀಡಾಕೂಟದಲ್ಲಿಯೂ ಭಾಗವಹಿಸಲಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ತನ್ನ ತಾಯ್ನಾಡಿನಲ್ಲೇ ಪ್ರವಾಸಿ ತಂಡವಾಗಿ ಟಿ20 ಸರಣಿಯನ್ನು ಆಡಲಿದೆ. ಹೌದು, ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ಸರಣಿಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ( Arun Jaitley Stadium) ಆತಿಥ್ಯವಹಿಸುತ್ತಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅಫ್ಘಾನಿಸ್ತಾನ ಈ ಸರಣಿಯನ್ನು ಆಯೋಜಿಸುತ್ತಿದ್ದು, ಟೀಂ ಇಂಡಿಯಾ ಪ್ರವಾಸಿ ತಂಡವಾಗಿ ಆಡಲಿದೆ.
ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿ
ವರದಿಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಟಿ20 ಸರಣಿ ನಡೆಯಲಿದೆ. ಮೇಲೆ ಹೇಳಿದಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಈ ಸರಣಿಯನ್ನು ಆಯೋಜಿಸುತ್ತಿದೆ. ಭದ್ರತಾ ಕಾಳಜಿಯಿಂದಾಗಿ ಅಫ್ಘಾನಿಸ್ತಾನವು ಭಾರತದಲ್ಲಿ ತನ್ನ ತವರು ಅಂತರರಾಷ್ಟ್ರೀಯ ಪಂದ್ಯಗಳನ್ನು ದೀರ್ಘಕಾಲದಿಂದ ಆಡುತ್ತಿದೆ. ಈ ಹಿಂದೆ, ತಂಡವು ಲಕ್ನೋ, ಡೆಹ್ರಾಡೂನ್ ಮತ್ತು ಗ್ರೇಟರ್ ನೋಯ್ಡಾವನ್ನು ತನ್ನ ತವರು ಸ್ಥಳಗಳನ್ನಾಗಿ ಮಾಡಿಕೊಂಡಿತ್ತು. ಈ ಮೈದಾನಗಳಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳ ವಿರುದ್ಧ ಅಫ್ಘಾನಿಸ್ತಾನ ಪಂದ್ಯಗಳನ್ನಾಡಿತ್ತು. ಆದರೆ ಭಾರತದ ವಿರುದ್ಧ ಯಾವುದೇ ತವರು ಸರಣಿಯನ್ನು ಭಾರತದಲ್ಲಿ ಆಡಿರಲಿಲ್ಲ. ಆದರೀಗ ಭಾರತದ ವಿರುದ್ಧ ಭಾರತದಲ್ಲೇ ಅಫ್ಘಾನಿಸ್ತಾನ ಟಿ20 ಸರಣಿಯನ್ನು ಆಯೋಜಿಸುತ್ತಿದೆ.
ಸೆಪ್ಟೆಂಬರ್‌ನಲ್ಲಿ ಟಿ20 ಸರಣಿ
ಕ್ರಿಕ್ಇನ್ಫೋ ವರದಿ ಪ್ರಕಾರ, ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯಗಳು ಸೆಪ್ಟೆಂಬರ್ 13, 15 ಮತ್ತು 17 ರಂದು ನಡೆಯಬಹುದು. ಎರಡೂ ಮಂಡಳಿಗಳು ಇನ್ನೂ ಸ್ಥಳ ಮತ್ತು ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸದಿದ್ದರೂ, ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಮತ್ತು ದೆಹಲಿ ಮೂರು ಪಂದ್ಯಗಳನ್ನು ಆಯೋಜಿಸಬಹುದು ಎಂದು ವರದಿಯಾಗಿದೆ. ಈ ಸರಣಿಯು 2026 ರ ಏಷ್ಯನ್ ಕ್ರೀಡಾಕೂಟಕ್ಕೆ ಸ್ವಲ್ಪ ಮೊದಲು ನಡೆಯಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಈ ಪ್ರಸ್ತಾವಿತ ಸರಣಿಯು ಭಾರತೀಯ ತಂಡದ ಬಿಡುವಿಲ್ಲದ ಅಂತರರಾಷ್ಟ್ರೀಯ ವೇಳಾಪಟ್ಟಿಯ ನಡುವೆ ನಡೆಯಲಿದೆ. ಶ್ರೀಲಂಕಾ ಪ್ರವಾಸದ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 27 ರಂದು ಕೊನೆಗೊಳ್ಳಲಿದ್ದು, 2026 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 24 ರಂದು ಜಪಾನ್‌ನಲ್ಲಿ ಪ್ರಾರಂಭವಾಗಲಿದೆ. ಪರಿಣಾಮವಾಗಿ, ಈ ಟಿ20 ಸರಣಿಯನ್ನು ಸೆಪ್ಟೆಂಬರ್ ಮಧ್ಯದಲ್ಲಿ ನಿಗದಿಪಡಿಸಲಾಗಿದೆ.
IND vs ZIM: ವೈಭವ್ ಆರ್ಭಟ; ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ
ಉಭಯ ತಂಡಗಳು ಕೊನೆಯದಾಗಿ 2026 ರ ಜೂನ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪ್ರವಾಸದ ಸಮಯದಲ್ಲಿ, ಭಾರತವು ನ್ಯೂ ಚಂಡೀಗಢದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಸೋಲಿಸಿತು. ನಂತರ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
