ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯ ವಿಶೇಷತೆ ಏನೆಂದರೆ, ಟೀಂ ಇಂಡಿಯಾಕ್ಕೆ ಭಾರತದಲ್ಲಿ ಅಫ್ಘಾನಿಸ್ತಾನ ಆತಿಥ್ಯವಹಿಸುತ್ತಿದೆ. ಅಂದರೆ ಟೀಂ ಇಂಡಿಯಾ ತನ್ನ ತವರಿನಲ್ಲಿ ಪ್ರವಾಸಿ ತಂಡವಾಗಿ ಆಡಲಿದೆ. ಇತ್ತ ಅಫ್ಘಾನಿಸ್ತಾನ ಆತಿಥೇಯ ತಂಡವಾಗಿ ಆಡಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಆದರೆ ಆ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ವರದಿಯ ಪ್ರಕಾರ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಸೆಪ್ಟೆಂಬರ್ 14 ರಂದು ಸರಣಿಯ ಎರಡನೇ ಟಿ20 ಪಂದ್ಯವನ್ನು ನಡೆಸಲು ಪರಿಗಣಿಸುತ್ತಿದೆ.
2ನೇ ಪಂದ್ಯದ ದಿನಾಂಕ ಬದಲಾವಣೆ
ಈಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದ್ದು, ಎರಡನೇ ಪಂದ್ಯ ಸೆಪ್ಟೆಂಬರ್ 15 ರಂದು ನಡೆಯಲಿದೆ. ಆದರೆ ಇದೀಗ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅಫ್ಘಾನ್ ಕ್ರಿಕೆಟ್ ಮಂಡಳಿಯು ಎರಡನೇ ಟಿ20 ಪಂದ್ಯವನ್ನು ಸೆಪ್ಟೆಂಬರ್ 14 ರಂದು ನಡೆಸಲು ಬಯಸಿದೆ. ಇದಕ್ಕೆ ಕಾರಣ, ಸೆಪ್ಟೆಂಬರ್ 14 ರಂದು ಭಾರತದಲ್ಲಿ ಗಣೇಶ ಚತುರ್ಥಿ ಹಬ್ಬವಿದೆ. ಈ ದಿನ ಸರ್ಕಾರಿ ರಜೆಯಾಗಿರುವ ಕಾರಣ ಪ್ರೇಕ್ಷಕರು ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬರುತ್ತಾರೆ ಎಂಬುದು.
ವೇಳಾಪಟ್ಟಿ ಬದಲಾಗಲು ಕಾರಣ
ಇದೇ ಕಾರಣಕ್ಕಾಗಿ ಅಫ್ಘಾನ್ ಮಂಡಳಿಯು ಸೆಪ್ಟೆಂಬರ್ 14 ರಂದು ಟಿ20 ಪಂದ್ಯವನ್ನು ಆಯೋಜಿಸುವ ಬಗ್ಗೆ ಯೋಚಿಸುತ್ತಿದೆ. ಸೆಪ್ಟೆಂಬರ್ 13 ಭಾನುವಾರವಾಗಿರುವ ಕಾರಣ ಪ್ರೇಕ್ಷಕರು ಖಚಿತವಾಗಿ ಕ್ರೀಡಾಂಗಣಕ್ಕೆ ಬರುತ್ತಾರೆ. ಸೆಪ್ಟೆಂಬರ್ 14 ಸೋಮವಾರವಾದರೂ, ಅಂದು ಗಣೇಶ ಚತುರ್ಥಿ ಇರುವ ಕಾರಣ ಅಂದು ಕೂಡ ಸರ್ಕಾರಿ ರಜೆ ಇರಲಿದೆ. ಹೀಗಾಗಿ ಹೆಚ್ಚಿನ ಪ್ರೇಕ್ಷಕರು ಮೈದಾನಕ್ಕೆ ಬರಲಿದ್ದಾರೆ. ಇದರಿಂದ ಟಿಕೆಟ್ ಮಾರಾಟ ಹೆಚ್ಚಳವಾಗುವುದರಿಂದ ಅಫ್ಘಾನ್ ಕ್ರಿಕೆಟ್ ಮಂಡಳಿಗೆ ಹೆಚ್ಚಿನ ಆದಾಯವನ್ನು ತಂದುಕೊಡುತ್ತದೆ. ಅದಕ್ಕಾಗಿಯೇ ಎಸಿಬಿ ಈ ನಿರ್ಧಾರಕ್ಕೆ ಬಂದಿದೆ. ಆದಾಗ್ಯೂ, ಇದಕ್ಕೆ ಬಿಸಿಸಿಐ ಅನುಮೋದನೆಯೂ ಅಗತ್ಯವಾಗಿರುತ್ತದೆ.
ICC Rankings: ಏಕದಿನ, ಟೆಸ್ಟ್, ಟಿ20 ಮಾದರಿಯಲ್ಲೂ ಭಾರತೀಯರದ್ದೇ ಪಾರುಪತ್ಯ
ಪ್ರಸ್ತುತ ವೇಳಾಪಟ್ಟಿ
ಈ ಸರಣಿ ಸೆಪ್ಟೆಂಬರ್ 13 ರಿಂದ 17 ರವರೆಗೆ ನಡೆಯಲಿದೆ. ಮೂರೂ ಪಂದ್ಯಗಳು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಫ್ಘಾನಿಸ್ತಾನವು ಭಾರತದ ನೆಲದಲ್ಲಿ ಟೀಂ ಇಂಡಿಯಾಕ್ಕೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳಿಗೆ ಭಾರತದಲ್ಲಿ ಆತಿಥ್ಯ ನೀಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:17 pm, Thu, 13 August 26
