ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಅಫ್ಘಾನಿಸ್ತಾನ 2-0 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡಿತ್ತು. ಹೀಗಾಗಿ ಮೂರನೇ ಪಂದ್ಯವನ್ನು ಗೆದ್ದು ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಸಲುವಾಗಿ ಅಫ್ಘನ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಚಿದಂಬರಂ ಮೈದಾನದಲ್ಲಿ ಅಫ್ಘನ್ ಬ್ಯಾಟಿಂಗ್ ವಿಭಾಗವನ್ನು ಕಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ (Prasidh Krishna) ಪವರ್ ಪ್ಲೇ ಮುಗಿಯುವುದಕ್ಕೂ ಮುನ್ನವೇ ಪ್ರಮುಖ 4 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
6 ರನ್ ನೀಡಿ 4 ವಿಕೆಟ್ ಪಡೆದ ಪ್ರಸಿದ್ಧ್
ಪವರ್ ಪ್ಲೇನಲ್ಲಿ ಅಂದರೆ ಮೊದಲ 10 ಓವರ್ಗಳಲ್ಲಿ 5 ಓವರ್ಗಳನ್ನು ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಕೇವಲ 6 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಉರುಳಿಸಿದರು. ಪ್ರಸಿದ್ಧ್ ಬೌಲ್ ಮಾಡಿದ ಈ 5 ಓವರ್ಗಳಲ್ಲಿ 2 ಓವರ್ಗಳು ಮೇಡನ್ ಆಗಿದ್ದವು. ಪ್ರಸಿದ್ಧ್ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡ ಮೊದಲ 10 ಓವರ್ಗಳಲ್ಲಿ ಕೇವಲ 37 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ನಾಲ್ವರು ಅಗ್ರ ಬ್ಯಾಟ್ಸ್ಮನ್ಗಳಲ್ಲಿ ಮೂವರು ಆಟಗಾರರು ಒಂದಂಕಿಗೆ ವಿಕೆಟ್ ಒಪ್ಪಿಸಿದರೆ, ಒಬ್ಬ ಬ್ಯಾಟ್ಸ್‌ಮನ್ ಮಾತ್ರ 11 ರನ್ ಕಲೆಹಾಕಿ ಎರಡಂಕಿ ಮೊತ್ತ ದಾಟಿದರು.
IND vs AFG: ನಾಯಕನಾಗಿ ಚೊಚ್ಚಲ ಏಕದಿನ ಸರಣಿ ಗೆದ್ದ ಶುಭ್ಮನ್ ಗಿಲ್
ಪ್ರಸಿದ್ಧ್ ಬೌಲ್ ಮಾಡಿದ 5 ಓವರ್ಗಳು
- ತಮ್ಮ ಖೋಟಾದ ಮೊದಲ ಓವರ್ನ ಮೊದಲ ಎಸೆತದಲ್ಲೇ ಪ್ರಸಿದ್ಧ್, ಅಫ್ಘನ್ ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್ ಉರುಳಿಸಿದರು. ಗುರ್ಬಾಜ್ 7 ಎಸೆತಗಳಲ್ಲಿ 5 ರನ್ ಬಾರಿಸಿ ಔಟಾದರು. ಉಳಿದಂತೆ ಈ ಓವರ್ನಲ್ಲಿ ಲೆಗ್ ಬೈಸ್ ಮೂಲಕ 4 ರನ್ಗಳು ಬಂದವು.
- ತಮ್ಮ ಖೋಟಾದ ಎರಡನೇ ಓವರ್ನಲ್ಲೂ ಕರಾರುವಕ್ಕಾದ ದಾಳಿ ಮಾಡಿದ ಪ್ರಸಿದ್ಧ್ ಈ ಓವರ್ನಲ್ಲಿ ಲೆಗ್ ಬೈಸ್ ಮೂಲಕ ಕೇವಲ 1 ರನ್ ಬಿಟ್ಟುಕೊಟ್ಟರು.
- ಪ್ರಸಿದ್ಧ್ ಬೌಲ್ ಮಾಡಿದ ಮೂರನೇ ಓವರ್ನ 4ನೇ ಎಸೆತದಲ್ಲಿ ರಹಮತ್ ಶಾ ಬೌಂಡರಿ ಬಾರಿಸಿದರು. ಆದರೆ ಅದೇ ಓವರ್ನ ಕೊನೆಯ ಎಸೆತದಲ್ಲಿ ಪ್ರಸಿದ್ಧ್ ರಹಮತ್ ಶಾ ವಿಕೆಟ್ ಪಡೆದರು.
- ನಾಲ್ಕನೇ ಓವರ್ನ ಎರಡನೇ ಎಸೆತದಲ್ಲಿ ಅಫ್ಘನ್ ಆರಂಭಿಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಉರುಳಿಸಿದ ಪ್ರಸಿದ್ಧ್ ಈ ಓವರ್ನಲ್ಲೂ ನೀಡಿದ್ದು ಕೇವಲ 1 ರನ್.
- 5ನೇ ಓವರ್ನಲ್ಲೂ ತಮ್ಮ ವಿಕೆಟ್ ಬೇಟೆ ಮುಂದುವರೆಸಿದ ಪ್ರಸಿದ್ಧ್, ಈ ಓವರ್ನ ಎರಡನೇ ಎಸೆತದಲ್ಲಿ ದರ್ವಿಶ್ ರಸೂಲಿ ಅವರ ವಿಕೆಟ್ ಕಬಳಿಸಿದರು. ಜೊತೆಗೆ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:44 pm, Sat, 20 June 26
