ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 (ICC Women’s T20 World Cup 2026) ರ 23 ನೇ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು (India Women vs Bangladesh Women) ಎದುರಿಸಲಿದೆ. ಲೀಗ್ ಹಂತದಲ್ಲಿ ಇದು ಎರಡೂ ತಂಡಗಳ ನಾಲ್ಕನೇ ಮತ್ತು ನಿರ್ಣಾಯಕ ಪಂದ್ಯವಾಗಿದೆ. ಎರಡೂ ತಂಡಗಳು ಆಡಿರುವ 3 ಪಂದ್ಯಗಳಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿವೆ. ಉಳಿದಂತೆ ತಲಾ ಒಂದೊಂದು ಪಂದ್ಯವನ್ನು ಸೋತಿವೆ. ಆದ್ದರಿಂದ, ಸೆಮಿಫೈನಲ್ ಕನಸನ್ನು ಜೀವಂತವಾಗಿರಸಬೇಕೆಂದರೆ ಉಭಯ ತಂಡಗಳಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಅದರಲ್ಲೂ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿರುವ ಭಾರತ ಮಹಿಳಾ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದ್ದರಿಂದ, ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಮಧ್ಯಮ ಕ್ರಮಾಂಕ ಲಯದಲ್ಲಿಲ್ಲ
ಅದರಲ್ಲೂ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಲಯ ಕಂಡುಕೊಳ್ಳದೆ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ, ಭಾರತ ತಂಡವು ತನ್ನ ಅತ್ಯುತ್ತಮ ಆಡುವ XI ಅನ್ನು ಇನ್ನೂ ಅಂತಿಮಗೊಳಿಸಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ, ಶ್ರೇಯಾಂಕ ಪಾಟೀಲ್ ಅವರ ಗಾಯ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದೆ. ಹೀಗಿರುವಾಗ ಬಾಂಗ್ಲಾದೇಶವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಏಕೆಂದರೆ ಬಾಂಗ್ಲಾದೇಶ ಕಳೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದೆ. ಇದರ ಜೊತೆಗೆ ಸೆಮಿಫೈನಲ್ ರೇಸ್ನಲ್ಲೂ ಉಳಿದಿದೆ. ಹೀಗಾಗಿ ಈ ಪಂದ್ಯದಲ್ಲಾದರೂ ಟೀಂ ಇಂಡಿಯಾ ತನ್ನೆಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡು ಆಡಬೇಕಿದೆ.
ಟಾಸ್ ಗೆದ್ದ ಬಾಂಗ್ಲಾದೇಶ
ಈ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಬಾಂಗ್ಲಾದೇಶ ತನ್ನ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ರಾಧಾ ಯಾದವ್ ಹಾಗೂ ರೇಣುಕಾ ಸಿಂಗ್ ಠಾಕೂರ್ಗೆ ಮೊದಲ ಬಾರಿಗೆ ಆಡಲು ಅವಕಾಶ ನೀಡಲಾಗಿದೆ.
IND W vs SA W: ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಮೊದಲ ಸೋಲು
ಉಭಯ ತಂಡಗಳು
ಬಾಂಗ್ಲಾದೇಶ ತಂಡ:ಬಾಂಗ್ಲಾದೇಶ ತಂಡ: ಜುವೈರಿಯಾ ಫೆರ್ಡೌಸ್, ದಿಲಾರಾ ಅಖ್ತರ್, ಶರ್ಮಿನ್ ಅಖ್ತರ್, ನಿಗರ್ ಸುಲ್ತಾನಾ (ನಾಯಕಿ), ಸೋಭಾನಾ ಮೊಸ್ತರಿ, ಶೋರ್ನಾ ಅಖ್ತರ್, ರಿತು ಮೋನಿ, ನಹಿದಾ ಅಖ್ತರ್, ರಬೆಯಾ ಖಾನ್, ಮಾರುಫಾ ಅಖ್ತರ್ ಮತ್ತು ಸಂಜಿದಾ ಅಖ್ತರ್ ಮೇಘಲಾ..
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಧಾ ಯಾದವ್ (ಪ್ರೇಮಾ ರಾವತ್ ಬದಲಿಗೆ), ಶ್ರೀ ಚರಣಿ, ನಂದಿನಿ ಶರ್ಮಾ ಮತ್ತು ರೇಣುಕಾ ಸಿಂಗ್ ಠಾಕೂರ್ (ಅರುಂಧತಿ ರೆಡ್ಡಿ ಬದಲಿಗೆ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:43 pm, Thu, 25 June 26