ಮ್ಯಾಂಚೆಸ್ಟರ್‌ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿತ್ತು. ಅದರಂತೆ ಈ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಗೆಲುವು ದಾಖಲಿಸಿ ಸೆಮಿಫೈನಲ್ ರೇಸ್ನಲ್ಲಿ ಜೀವಂತವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 136 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17ನೇ ಓವರ್ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು. ಇತ್ತ ಈ ಸೋಲಿನೊಂದಿಗೆ ಬಾಂಗ್ಲಾ ತಂಡ ಸೆಮಿಫೈನಲ್ ರೇಸ್ನಿಂದ ಭಾಗಶಃ ಹೊರಬಿದ್ದಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತಾದರೂ ಕೇವಲ 5 ಬ್ಯಾಟರ್ಗಳಿಗೆ ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಈ 5 ಬ್ಯಾಟರ್ಗಳು ಉತ್ತಮ ಆರಂಭವನ್ನು ಪಡೆದರಾದರೂ ಯಾರಿಗೂ ಈ ಇನ್ನಿಂಗ್ಸ್ ಅನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಂಗ್ಲಾದೇಶ ಪರ ಜುವೈರಿಯಾ ಫಿರ್ದೌಸ್ ಅತ್ಯಧಿಕ 33 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನಿಗರ್ ಸುಲ್ತಾನ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಶೋಭನಾ ಕೂಡ 22 ರನ್ಗಳ ಕಾಣಿಕೆ ನೀಡಿದರು.
ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲಿ ಮಿಂಚಿದ ರಾಧಾ ಯಾದವ್ 3 ವಿಕೆಟ್ ಪಡೆದರೆ ಶ್ರೀ ಚರಣಿ 2 ವಿಕೆಟ್ ಕಬಳಿಸಿದರು. ರೇಣುಕಾ ಸಿಂಗ್ ಠಾಕೂರ್ ಮತ್ತು ನಂದಿನಿ ಶರ್ಮಾ ತಲಾ 1 ವಿಕೆಟ್ ಪಡೆದರು. ಆದಾಗ್ಯೂ ಈ ಪಂದ್ಯದಲ್ಲಿ ಬಾಂಗ್ಲಾ ತಂಡ 100 ರನ್ಗಳ ಗಡಿ ದಾಟಲು ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣವಾಯಿತು. ಎಂದಿನಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರ್ತಿಯರು 4 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಬಾಂಗ್ಲಾ ತಂಡ 136 ರನ್ ಕಲೆಹಾಕಿತು. ಇಲ್ಲದಿದ್ದರೆ ತಂಡದ ಸ್ಕೋರ್ 100 ರ ಗಡಿ ಕೂಡ ದಾಟುತ್ತಿರಲಿಲ್ಲ.
