ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತ್ಯವಾಗಿದೆ. ಆತಿಥೇಯ ಇಂಗ್ಲೆಂಡ್ ಈ ಚುಟುಕು ಸಮರದಲ್ಲಿ ವಿಶ್ವ ಚಾಂಪಿಯನ್ ಟೀಂ ಇಂಡಿಯಾವನ್ನು 4-0 ಅಂತರದಿಂದ ಮಣಿಸಿ ಮೊಟ್ಟ ಮೊದಲ ಬಾರಿಗೆ ಟಿ20 ಸರಣಿ ಗೆದ್ದ ದಾಖಲೆಯನ್ನು ನಿರ್ಮಿಸಿತು. ಇದೀಗ ಆಂಗ್ಲರ ನಾಡಿನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಮುಜುಗರಕ್ಕೊಳಗಾಗಿರುವ ಟೀಂ ಇಂಡಿಯಾ, ಟಿ20 ಸರಣಿ ಸೋಲಿನ ಅವಮಾನಕ್ಕೆ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜುಲೈ 14 ರಿಂದ ಆರಂಭವಾಗಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಯುವ ಸ್ಟಾರ್ ಆಲ್‌ರೌಂಡರ್ ಹರ್ಷಿತ್ ರಾಣಾ ಈ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಯುವ ವೇಗಿ ಪ್ರಿನ್ಸ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಹರ್ಷಿತ್ ಮತ್ತು ವರುಣ್ಗೆ ಗಾಯ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಬರುವ ಮಂಗಳವಾರದಿಂದ ಆರಂಭವಾಗಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನ ಏಕದಿನ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಈ ಮೊದಲು ಏಕದಿನ ತಂಡದಲ್ಲಿ ಆಯ್ಕೆಯಾಗಿದ್ದ ಹರ್ಷಿತ್ ರಾಣಾ ಗ್ರೇಡ್ 1 ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಹೇಳಿದೆ. ಇತ್ತ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಮಂಡಿರಜ್ಜು ಗಾಯದಿಂದ (ಗ್ರೇಡ್ 2) ಬಳಲುತ್ತಿದ್ದು, ಅವರನ್ನು ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಹೊರಗಿಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಅಲ್ಲದೆ ವರುಣ್ ಚಕ್ರವರ್ತಿ ಬದಲಿಗೆ ರವಿ ಬಿಷ್ಣೋಯ್ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ.
Published On – 4:17 pm, Sun, 12 July 26
