ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಗುರ್ನೂರ್ ಬ್ರಾರ್ (Gurnoor Brar) ಒಂದೇ ಓವರ್ನಲ್ಲಿ ಇಂಗ್ಲೆಂಡ್ ತಂಡದ ಇಬ್ಬರು ಆರಂಭಿಕರನ್ನು ಔಟ್ ಮಾಡಿದರು. ತಮ್ಮ ಖೋಟಾದ ಮೊದಲ ಎರಡು ಓವರ್ಗಳಲ್ಲಿ ದುಬಾರಿಯಾಗಿದ್ದ ಬ್ರಾರ್, ಮೂರನೇ ಓವರ್ನಲ್ಲಿ ಜಾಕೋಬ್ ಬೆಥೆಲ್ ಹಾಗೂ ಬೆನ್ ಡಕೆಟ್ ಅವರನ್ನು ಪೆವಿಲಿಯನ್ಗಟ್ಟಿದರು. ಅರ್ಧಶತಕದ ಜೊತೆಯಾಟದ ಮೂಲಕ ಭಾರತ ತಂಡಕ್ಕೆ ಕಂಟಕರಾಗಿದ್ದ ಇವರಿಬ್ಬರನ್ನು ಔಟ್ ಮಾಡುವ ಮೂಲಕ ಬ್ರಾರ್ ತಂಡವನ್ನು ನಿರಾಳಗೊಳಿಸಿದರು.
ಇಂಗ್ಲೆಂಡ್ಗೆ ಉತ್ತಮ ಆರಂಭ
ಎಡ್ಜ್ಬಾಸ್ಟನ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ಗೆ ವೇಗದ ಆರಂಭ ಸಿಗದಿದ್ದರೂ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಬೆಥೆಲ್ ಹಾಗೂ ಡಕೆಟ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಇತ್ತ ಜಸ್ಪ್ರೀತ್ ಬುಮ್ರಾ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಆರಂಭಿಕರಿಗೆ ಸುಲಭವಾಗಿ ರನ್ ಕಲೆಹಾಕಲು ಬಿಡಲಿಲ್ಲ. ಈ ಒತ್ತಡದ ನಡುವೆಯೂ ಇಂಗ್ಲೆಂಡ್ ಆರಂಭಿಕರು ವಿಕೆಟ್ ಬಿಟ್ಟುಕೊಡಲಿಲ್ಲ. ಒಂದೆಡೆ ಬೆಥೆಲ್ ರನ್ ಕಲೆಹಾಕಲು ತಿಣುಕಾಡಿದರೆ, ಮತ್ತೊಂದೆಡೆ ಡಕೆಟ್ ಕೆಟ್ಟ ಎಸೆತಗಳನ್ನು ಸರಿಯಾಗಿ ದಂಡಿಸಿದರು. ಅದರಲ್ಲೂ ಬ್ರಾರ್ ಬೌಲಿಂಗ್ನಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆಗರೆದರು.
ಬೆಥೆಲ್ ಬಲಿ ಪಡೆದ ಬ್ರಾರ್
ಬ್ರಾರ್ ಎರಡು ಓವರ್ಗಳಲ್ಲಿ ದುಬಾರಿಯಾದ ಕಾರಣ ಇಂಗ್ಲೆಂಡ್ 10 ಓವರ್ಗಳಲ್ಲಿ 50 ರನ್ಗಳ ಗಡಿ ದಾಟಿತು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾಕ್ಕೆ ತಲೆನೋವು ತಂದಿತ್ತು. ಆದರೆ 13ನೇ ಓವರ್ನಲ್ಲಿ ಮತ್ತೆ ದಾಳಿಗಿಳಿದ ಬ್ರಾರ್, ಈ ಓವರ್ನ ಎರಡನೇ ಎಸೆತದಲ್ಲಿ ಬೆಥೆಲ್ ಅವರ ವಿಕೆಟ್ ಪಡೆದರು. ಬೆಥೆಲ್ ದೊಡ್ಡ ಶಾಟ್ ಆಡುವ ಯತ್ನದಲ್ಲಿ ವಾಷಿಂಗ್ಟನ್ ಸುಂದರ್ಗೆ ಕ್ಯಾಚ್ ನೀಡಿದರು. ಇನ್ನು ಅದೇ ಓವರ್ನ 4ನೇ ಎಸೆತದಲ್ಲಿ ಬ್ರಾರ್, ಡಕೆಟ್ ಅವರನ್ನು ಪೆವಿಲಿಯನ್ಗಟ್ಟಿದರು.
IND vs ENG: ಏಕದಿನ ಸರಣಿಯಲ್ಲಿ 7 ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್ ಕೊಹ್ಲಿ
ಅದ್ಭುತ ಕ್ಯಾಚ್ ಹಿಡಿದ ಬುಮ್ರಾ
ಡಕೆಟ್ ಥರ್ಡ್ ಮ್ಯಾನ್ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಅಲ್ಲೆ ಇದ್ದ ಬುಮ್ರಾ ಸಮಯ ಪ್ರಜ್ಞೆ ಮೆರೆದು ಅದ್ಭುತ ಕ್ಯಾಚ್ ತೆಗೆದುಕೊಂಡರು. ಕ್ಯಾಚ್ ತೆಗೆದುಕೊಳ್ಳುವ ಯತ್ನದಲ್ಲಿ ತಾನು ಬೌಂಡರಿ ಗೆರೆಯನ್ನು ದಾಟುತ್ತಿರುವುದನ್ನು ಗಮನಿಸಿದ ಬುಮ್ರಾ, ಚೆಂಡನ್ನು ಬೌಂಡರಿ ಒಳಗೆ ಹಿಡಿದು ನಂತರ ಅದನ್ನ ಮೇಲಕ್ಕೆ ಎಸೆದು ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಹೀಗಾಗಿ ಇಂಗ್ಲೆಂಡ್ ಕೇವಲ 2 ರನ್ಗಳ ಅಂತರದಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:59 pm, Tue, 14 July 26
