IND vs ENG: ಟೀಮ್ ಇಂಡಿಯಾ ಸೋಲಿಗೆ ಈ 5 ತಪ್ಪುಗಳೇ ಕಾರಣ! – Kannada News | IND vs ENG 2nd T20: 5 Reasons Why India Lost

ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬಯ್ಆಟ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 190 ರನ್ ಕಲೆಹಾಕಿತು. ಭಾರತ ನೀಡಿದ್ದ 191 ರನ್‌ಗಳ ಸವಾಲಿನ ಗುರಿಯನ್ನು ಇಂಗ್ಲೆಂಡ್ ಇನ್ನು 1 ಓವರ್ ಬಾಕಿ ಇರುವಂತೆಯೇ ತಲುಪಿ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಅತ್ತ ಇಂಗ್ಲೆಂಡ್ ಗೆಲುವಿನಲ್ಲಿ ಭಾರತೀಯ ಆಟಗಾರರು ಮಾಡಿದ ತಪ್ಪುಗಳ ಪಾಲೂ ಇತ್ತು. ಅದರಂತೆ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

1. ರವಿ ಬಿಷ್ಣೋಯ್ ದುಬಾರಿ ಓವರ್​:

ಈ ಪಂದ್ಯದ ಅತಿ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ ಸ್ಪಿನ್ನರ್ ರವಿ ಬಿಷ್ಣೋಯ್ ಎಸೆದ 17ನೇ ಓವರ್. ಈ ಓವರ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್ ಜೇಕಬ್ ಬೆಥೆಲ್ ಸತತ ಮೂರು ಸಿಕ್ಸರ್ ಸಿಡಿಸಿದರು. ಅಷ್ಟೇ ಅಲ್ಲದೆ, ಬಿಷ್ಣೋಯ್ ಒಂದೇ ಓವರ್‌ನಲ್ಲಿ ಎರಡು ನೋ-ಬಾಲ್‌ಗಳನ್ನು ಎಸೆದು ಫ್ರೀ-ಹಿಟ್ ಕೊಡುಗೆಯನ್ನು ಸಹ ನೀಡಿದರು. ಈ ಮೂಲಕ ಈ ಓವರ್‌ನಲ್ಲಿ ನೀಡಿದ್ದು ಬರೋಬ್ಬರಿ 29 ರನ್​ಗಳು. ನಿರ್ಣಾಯಕ ಹಂತದಲ್ಲಿ 29 ರನ್​ ನೀಡಿದ್ದರಿಂದ ಪಂದ್ಯವು ಸಂಪೂರ್ಣವಾಗಿ ಇಂಗ್ಲೆಂಡ್ ಕೈವಶವಾಯಿತು.

2. ಆರ್ಭಟಿಸದ ಇಶಾನ್ ಕಿಶನ್:

ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 43 ರನ್ ಸಿಡಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ 49 ರನ್ ಗಳಿಸಲು ತೆಗೆದುಕೊಂಡಿದ್ದು ಬರೋಬ್ಬರಿ 40 ಎಸೆತಗಳು. ಟಿ20 ಮಾದರಿಗೆ ತಕ್ಕಂತೆ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳಲು ಕಿಶನ್ ವಿಫಲರಾಗಿದ್ದರು. ಪರಿಣಾಮ ಟೀಮ್ ಇಂಡಿಯಾ ರನ್ ವೇಗ ಕುಂಠಿತವಾಯಿತು. ಇದರಿಂದ ಬೃಹತ್ ಮೊತ್ತ ಪೇರಿಸಿಬೇಕಿದ್ದ ಭಾರತದ ಇನಿಂಗ್ಸ್ 190 ರನ್​ಗಳೊಂದಿಗೆ ಅಂತ್ಯಗೊಂಡಿತು.

3. ಮಂದಗತಿಯ ಬ್ಯಾಟಿಂಗ್ ಮಂದಗತಿ:

ಭಾರತ ತಂಡವು 13 ಓವರ್‌ಗಳಲ್ಲಿ 2 ವಿಕೆಟ್‌ಗೆ 130 ರನ್ ಗಳಿಸಿ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿತ್ತು. ಆದರೆ ಕೊನೆಯ 7 ಓವರ್‌ಗಳಲ್ಲಿ ಟೀಮ್ ಇಂಡಿಯಾ ಕೇವಲ 60 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಶೇಷವಾಗಿ 15ನೇ ಓವರ್‌ನಲ್ಲಿ ಕೇವಲ 6 ಸಿಂಗಲ್ಸ್ ಬಂದರೆ, 16ನೇ ಓವರ್‌ನಲ್ಲಿ ಕೇವಲ 2 ರನ್ ಮಾತ್ರ ಕಲೆಹಾಕಿದ್ದರು. ಇದರಿಂದಾಗಿ ಸ್ಕೋರ್ 210-220 ತಲುಪುವ ಬದಲು ಟೀಮ್ ಇಂಡಿಯಾ ಮೊತ್ತ 190 ರನ್‌ಗಳಿಗೆ ಸೀಮಿತವಾಯಿತು.

4. ಹ್ಯಾರಿ ಬ್ರೂಕ್ ಕೌಂಟರ್ ಅಟ್ಯಾಕ್:

ಇಂಗ್ಲೆಂಡ್ ತಂಡ ಮೊದಲ ಓವರ್​ನಲ್ಲೇ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಎರಡು ವಿಕೆಟ್ ಪಡೆದಿದ್ದು ಅರ್ಷದೀಪ್ ಸಿಂಗ್. ಆದರೆ ಈ ಆಘಾತದಿಂದ ಇಂಗ್ಲೆಂಡ್ ತಂಡವನ್ನು ಪಾರು ಮಾಡುವಲ್ಲಿ ನಾಯಕ ಹ್ಯಾರಿ ಬ್ರೂಕ್ ಯಶಸ್ವಿಯಾಗಿದ್ದರು. ಅರ್ಷದೀಪ್ ಸಿಂಗ್ ಎಸೆದ ತಮ್ಮ 2ನೇ ಓವರ್​ನಲ್ಲಿ ಬ್ರೂಕ್ ಬರೋಬ್ಬರಿ 27 ರನ್​ ಚಚ್ಚಿದ್ದರು. ಅಲ್ಲದೆ ಕೇವಲ 15 ಎಸೆತಗಳಲ್ಲಿ ಬ್ರೂಕ್ 39 ರನ್ ಸಿಡಿಸಿ ಇಂಗ್ಲೆಂಡ್‌ ಚೇಸಿಂಗ್​ಗೆ ಅಡಿಪಾಯ ಹಾಕಿಕೊಟ್ಟರು. ಅಂದರೆ ಆರಂಭಿಕ ಆಘಾತಕ್ಕೆ ಒಳಗಾದರೂ ಬ್ರೂಕ್ ಮಾಡಿದ ಕೌಂಡರ್ ಅಟ್ಯಾಕ್​ನಿಂದ ಇಂಗ್ಲೆಂಡ್ ಪವರ್​ಪ್ಲೇನಲ್ಲಿ 61 ರನ್​ಗಳಿಸಲು ಸಾಧ್ಯವಾಯಿತು.

5. ಜೇಕಬ್ ಬೆಥೆಲ್ ಅವರ ಸ್ಫೋಟಕ ಬ್ಯಾಟಿಂಗ್‌:

ಇಂಗ್ಲೆಂಡ್‌ ತಂಡದ ಯುವ ಆಟಗಾರ ಜೇಕಬ್ ಬೆಥೆಲ್ ಭಾರತೀಯ ಬೌಲರ್‌ಗಳ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 76 ರನ್ ಸಿಡಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಬೆಥೆಲ್, ನಿರ್ಣಾಯಕ ಹಂತದಲ್ಲಿ ಅಬ್ಬರಿಸಿದ್ದು ತಂಡದ ಗೆಲುವಿಗೆ ಕಾರಣವಾಯಿತು. ಇತ್ತ ಟೀಮ್ ಇಂಡಿಯಾ ಬೌಲರ್​ಗಳು ಹಲವು ತಂತ್ರಗಳನ್ನು ಪ್ರಯೋಗಿಸಿದರೂ ವಿಕೆಟ್ ಪಡೆಯಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಜೇಕಬ್ ಬೆಥೆಲ್ ಇಂಗ್ಲೆಂಡ್ ತಂಡಕ್ಕೆ 4 ವಿಕೆಟ್​ಗಳ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಯಾರೂ ಮಾಡದ ದಾಖಲೆ ಬರೆದ ವೈಭವ್!

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವು 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಈ ಸರಣಿಯ ಮೂರನೇ ಪಂದ್ಯವು  ಜುಲೈ 7 ರಂದು ನಾಟಿಂಗ್ಹ್ಯಾಮ್‌ನಲ್ಲಿ ನಡೆಯಲಿದ್ದು, ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *