ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ 2027ರ ಏಕದಿನ ವಿಶ್ವಕಪ್ (2027 World Cup) ತಯಾರಿಯೂ ಶುರುವಾಗಿದೆ. ಈ ಪ್ರವಾಸಕ್ಕೆ ಬಿಸಿಸಿಐ (BCCI) ಯಾವ ತಂಡವನ್ನು ಪ್ರಕಟಿಸಿತ್ತೋ ಭಾಗಶಃ ಆ ತಂಡವೇ 2027 ರ ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇಂಗ್ಲೆಂಡ್ ಸರಣಿಯ ನಡುವೆ ಸ್ಫೋಟಕ ಮಾಹಿತಿಯೊಂದು ಟೀಂ ಇಂಡಿಯಾ ಪಾಳಯದಿಂದ ಹೊರಬಿದ್ದಿದೆ. ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಏಕದಿನ ಕ್ರಿಕೆಟ್ಗೂ ವಿದಾಯ ಹೇಳುತ್ತಿದ್ದು, ಲಾರ್ಡ್ಸ್‌ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯ ರೋಹಿತ್ ವೃತ್ತಿ ಬದುಕಿನ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ. ವರದಿಯಂತೆ ರೋಹಿತ್ ನಿವೃತ್ತಿ ಘೋಷಿಸಿದರೆ ಏಕದಿನ ತಂಡದಲ್ಲಿ ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ವರದಿಗಳ ಪ್ರಕಾರ, ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದಿಂದ ತೆಗೆದುಹಾಕಲು ನಿರ್ಧರಿಸಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ಅವರನ್ನು ತಂಡದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಲು ಆಯ್ಕೆ ಮಂಡಳಿ ತೀರ್ಮಾನಿಸಿದೆ. ಅಲ್ಲದೆ ಈ ನಿರ್ಧಾರದ ಬಗ್ಗೆ ರೋಹಿತ್‌ಗೆ ಈಗಾಗಲೇ ತಿಳಿಸಲಾಗಿದ್ದು, ಭವಿಷ್ಯದ ಸಿದ್ಧತೆಗಳಿಗಾಗಿ ಅವರ ಬದಲಿಗಾಗಿ ಸಂಪೂರ್ಣ ಯೋಜನೆಯನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ.
ರೋಹಿತ್ ಸ್ಥಾನವನ್ನು ತುಂಬುವವರು ಯಾರು?
ಮಾಧ್ಯಮ ವರದಿಗಳ ಪ್ರಕಾರ, ಆಯ್ಕೆದಾರರು ರೋಹಿತ್ ಶರ್ಮಾ ಬದಲಿಗೆ 24 ವರ್ಷದ ಯಶಸ್ವಿ ಜೈಸ್ವಾಲ್ ಅವರನ್ನು ಪರಿಗಣಿಸಲು ನಿರ್ಧರಿಸಿದ್ದಾರೆ. 2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಜೈಸ್ವಾಲ್ ಅವರನ್ನು ಈಗ ಆರಂಭಿಕ ಆಟಗಾರನನ್ನಾಗಿ ಆಡಿಸಲು ಬಯಸಿದೆ. ಆದ್ದರಿಂದ, ಇಂಗ್ಲೆಂಡ್ ಸರಣಿ ಮುಗಿದ ತಕ್ಷಣ ಯಶಸ್ವಿ ಜೈಸ್ವಾಲ್ ಅವರಿಗೆ ಏಕದಿನ ತಂಡದಲ್ಲಿ ನಿಯಮಿತ ಅವಕಾಶಗಳನ್ನು ನೀಡಲಾಗುವುದು, ಇದರಿಂದ ಅವರು ಮುಂಬರುವ ಏಕದಿನ ವಿಶ್ವಕಪ್ಗೆ ಸಿದ್ಧರಾಗಬಹುದು.
ರೋಹಿತ್ ಕೊನೆಯ ಏಕದಿನ ಪಂದ್ಯ
2025 ರ ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂಬುದು ಗಮನಿಸಬೇಕಾದ ಸಂಗತಿ, ಇದು ಎಲ್ಲರನ್ನೂ ಅಚ್ಚರಿಗೊಳಿಸಿತು. ಅಂದಿನಿಂದ, 2027 ರ ವಿಶ್ವಕಪ್ವರೆಗೆ ರೋಹಿತ್ ತಂಡದಲ್ಲಿ ಉಳಿಯುವುದು ಅನುಮಾನ ಎನ್ನಲಾಗುತ್ತಿತ್ತು. ಅದರಂತೆ ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಪಂದ್ಯವಾಗುವ ಸಾಧ್ಯತೆಗಳಿವೆ. ಆದಾಗ್ಯೂ ಈ ಬಗ್ಗೆ ಬಿಸಿಸಿಐ ಆಗಲಿ ಅಥವಾ ರೋಹಿತ್ ಆಗಲಿ ಏನನ್ನು ಖಚಿತವಾಗಿ ಹೇಳಿಲ್ಲ. ಹೀಗಾಗಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಕೊನೆಯ ಏಕದಿನ ಪಂದ್ಯದ ಬಳಿಕ ಪರಿಸ್ಥಿತಿ ಸ್ಪಷ್ಟವಾಗಲಿದೆ.
ಏಕದಿನದಲ್ಲಿ ಜೈಸ್ವಾಲ್ ಪ್ರದರ್ಶನ ಹೇಗಿದೆ?
ಇನ್ನು ಏಕದಿನದಲ್ಲಿ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಲಿರುವ ಯಶಸ್ವಿ ಜೈಸ್ವಾಲ್ ಅವರ ಏಕದಿನ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಯಶಸ್ವಿ ಜೈಸ್ವಾಲ್ 2025 ರಲ್ಲಿ ಇದೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಭಾರತ ಪರ ಒಟ್ಟು ಆರು ಏಕದಿನ ಪಂದ್ಯಗಳನ್ನು ಆಡಿರುವ ಜೈಸ್ವಾಲ್, 71.25 ರ ಸರಾಸರಿಯಲ್ಲಿ 285 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ.
ಒಡಿಐನಿಂದಲೂ ರೋಹಿತ್ ಶರ್ಮಾ ನಿವೃತ್ತಿ? ಜುಲೈ 19ರಂದು ಲಾರ್ಡ್ಸ್‌ನಲ್ಲಿ ಹಿಟ್ಮ್ಯಾನ್ ಕೊನೆಯ ಪಂದ್ಯ?
ಮುಂದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡ ಸುಮಾರು 20 ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಈ ಎಲ್ಲಾ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕ ಆಟಗಾರನಾಗಿ ಪ್ರಯತ್ನಿಸಲಾಗುತ್ತದೆ. ಭಾರತದ ಮುಂದಿನ ಏಕದಿನ ಸರಣಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದ್ದು, ಈ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ರೋಹಿತ್ ಶರ್ಮಾ ಅವರನ್ನು ಬದಲಾಯಿಸಬಹುದು. ಇದರ ನಂತರ, ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗಳನ್ನು ತವರಿನಲ್ಲಿ ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 3:01 pm, Fri, 17 July 26
