
ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ತನ್ನ ಎರಡನೇ ಇನ್ನಿಂಗ್ಸ್ ಅನ್ನು 341 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಆತಿಥೇಯ ಇಂಗ್ಲೆಂಡ್ ಮಹಿಳಾ ತಂಡದ ಗೆಲುವಿಗೆ 457 ರನ್ಗಳ ಬೃಹತ್ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಪರ ಯಾಸ್ತಿಕಾ ಭಾಟಿಯಾ ಸ್ಮರಣೀಯ ಶತಕ ಸಿಡಿಸಿದರೆ, ಉಪನಾಯಕಿ ಸ್ಮೃತಿ ಮಂಧಾನ ಹಾಗೂ ವಿಕೆಟ್ಕೀಪರ್ ರಿಚಾ ಘೋಷ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇತ್ತ ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ ಸತತ ಎರಡನೇ ಇನ್ನಿಂಗ್ಸ್ನಲ್ಲೂ ಐದು ವಿಕೆಟ್ಗಳ ಗೊಂಚಲು ಪಡೆದರು.
ಮೊದಲ ಇನ್ನಿಂಗ್ಸ್ನಲ್ಲಿ 285 ರನ್ಗಳಿಗೆ ಆಲೌಟ್ ಆಗಿದ್ದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ 170 ರನ್ಗಳಿಗೆ ಕಟ್ಟಿಹಾಕಿತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 115 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಮೊದಲ ವಿಕೆಟ್ಗೆ 88 ರನ್ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಆಟಗಾರ್ತಿ ಶಫಾಲಿ 33 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ಇದಾದ ಬಳಿಕ ಜೊತೆಯಾದ ಸ್ಮೃತಿ ಹಾಗೂ ಯಾಸ್ತಿಕಾ ಎರಡನೇ ವಿಕೆಟ್ಗೆ 73 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದೇ ವೇಳೆ ಸ್ಮೃತಿ ಸತತ ಎರಡನೇ ಇನ್ನಿಂಗ್ಸ್ನಲ್ಲೂ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಎರಡನೇ ಇನ್ನಿಂಗ್ಸ್ನಲ್ಲೂ ಶತಕ ವಂಚಿತರಾದ ಸ್ಮೃತಿ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.