
2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 8 ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, ಟ್ರೋಫಿಗಾಗಿ ಕೆಲವು ಹೃದಯಗಳನ್ನು ಒಡೆಯುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ. ಅಂದರೆ ಟಿ20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ಅಭಿಮಾನಿಗಳ ಹೃದಯ ಒಡೆಯುವುದಕ್ಕೆ ನಾವು ಸಿದ್ಧ ಎಂಬುದು ಕಿವೀಸ್ ನಾಯಕನ ಹೇಳಿಕೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, 2023 ರ ಏಕದಿನ ವಿಶ್ವಕಪ್ ಫೈನಲ್ಗೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ನೀಡಿದ್ದ ಹೇಳಿಕೆಯನ್ನೇ ಪುನಾರವರ್ತಿಸಿದ್ದಾರೆ. ವಾಸ್ತವವಾಗಿ 2023 ರ ಏಕದಿನ ವಿಶ್ವಕಪ್ ಫೈನಲ್ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಮ್ಮಿನ್ಸ್, ‘ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರನ್ನು ಮೌನಗೊಳಿಸುವುದಾಗಿ’ ಹೇಳಿದ್ದರು. ಕಮ್ಮಿನ್ಸ್ ಹೇಳಿದಂತೆಯೇ ಫೈನಲ್ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ಅಭಿಮಾನಿಗಳನ್ನು ಮೌನಕ್ಕೆ ತಳ್ಳಿತ್ತು.
ಇದೀಗ ಮಿಚೆಲ್ ಸ್ಯಾಂಟ್ನರ್ ಕೂಡ ಅದೇ ರೀತಿಯ ಹೇಳಿಕೆಯನ್ನು ನೀಡಿದ್ದು, ‘ಈ ಫೈನಲ್ ಗೆಲ್ಲಲು ತಮ್ಮ ತಂಡವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸದಿದ್ದರೂ, ಸಣ್ಣ ವಿವರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಪ್ರದರ್ಶನವನ್ನು ಸುಧಾರಿಸಲು ಪ್ರಯತ್ನಿಸುತ್ತೇವೆ. ‘ನಮ್ಮ ಗೆಲುವು ಕೆಲವು ಅಭಿಮಾನಿಗಳ ಹೃದಯವನ್ನು ಒಡೆದರೆ, ನಮ್ಮ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ನಾವು ಬಯಸುವುದರಿಂದ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ’ ಎಂದಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಮಿಚೆಲ್ ಸ್ಯಾಂಟ್ನರ್ ನೀಡಿರುವ ಈ ಹೇಳಿಕೆ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಏಕೆಂದರೆ 2023 ರ ಏಕದಿನ ವಿಶ್ವಕಪ್ ಫೈನಲ್ನಲ್ಲೂ ಕಮ್ಮಿನ್ಸ್ ಈ ರೀತಿಯ ಹೇಳಿಕೆಯನ್ನು ನೀಡಿ, ಹೇಳಿದಂತೆಯೇ ಮಾಡಿ ತೋರಿಸಿದ್ದರು. ಹೀಗಾಗಿ ಮಿಚೆಲ್ ಸ್ಯಾಂಟ್ನರ್ ಕೂಡ ಅದೇ ರೀತಿ ಮಾಡುತ್ತಾರೆಯೇ ಎಂಬುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ ಟಿ20 ಮಾದರಿಯಲ್ಲಿ ಭಾರತ ತಂಡ ಬಲಿಷ್ಠವಾಗಿರುವುದರಿಂದ ಕಿವೀಸ್ ನಾಯಕನ ಹೇಳಿಕೆಯನ್ನು ಅವರಿಗೆ ತಿರುಗುಬಾಣ ಮಾಡಲಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ