ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರರ ವಿಕೆಟ್ ಪತನ ಆಘಾತವನ್ನುಂಟು ಮಾಡಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಪರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಹುಲ್ ತಂಡವನ್ನು 284 ರನ್ಗಳಿಗೆ ಕೊಂಡೊಯ್ದಿದ್ದು ಮಾತ್ರವಲ್ಲದೆ ತಾವು ಕೂಡ 92 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದರು.
