ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಕಾರಣ ಎರಡೂ ತಂಡಗಳು ಪರಸ್ಪರ ದ್ವಿಪಕ್ಷೀಯ ಸರಣಿಗಳನ್ನು ಆಡದೆ ಇರುವುದು. ಆದಾಗ್ಯೂ ಉಭಯ ತಂಡಗಳು ಐಸಿಸಿ (ICC) ಹಾಗೂ ಎಸಿಸಿ ಈವೆಂಟ್ಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತವೆ. ಈ ಈವೆಂಟ್ಗಳು ಅಪರೂಪಕ್ಕೊಮ್ಮೆ ನಡೆಯುವುದರಿಂದ ಅಭಿಮಾನಿಗಳು ಎರಡು ತಂಡಗಳ ನಡುವಿನ ಕದನವನ್ನು ವೀಕ್ಷಿಸಲು ಸಾಕಷ್ಟು ಸಮಯ ಕಾಯಬೇಕು. ಇದೀಗ ಆ ಸಮಯ ಸನಿಹ ಬಂದಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಇನ್ನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಂಗಳದಲ್ಲಿ ಪರಸ್ಪರ ಎದುರುಬದುರಾಗಲಿವೆ.
ದಿಗ್ಗಜರಿಲ್ಲದೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಭಾರತ ಪರ ಆಡುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಏಕೆಂದರೆ ಏಷ್ಯನ್ ಕ್ರೀಡಾಕೂಟವು ಟಿ20 ಸ್ವರೂಪದಲ್ಲಿ ನಡೆಯಲಿದೆ. ಟಿ20 ಸ್ವರೂಪಕ್ಕೆ ಇವರಿಬ್ಬರು ವಿದಾಯ ಹೇಳಿರುವ ಕಾರಣ ಟೀಂ ಇಂಡಿಯಾ ಇವರಿಬ್ಬರಿಲ್ಲದೆ ಪಾಕ್ ತಂಡವನ್ನು ಎದುರಿಸಲಿದೆ.
ಏಷ್ಯನ್ ಕ್ರೀಡಾಕೂಟಕ್ಕಾಗಿ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪುರುಷರ ವಿಭಾಗದಲ್ಲಿ, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಶ್ರೇಯಾಂಕದ ಆಧಾರದ ಮೇಲೆ ನಾಕೌಟ್ ಹಂತಗಳಿಗೆ ನೇರವಾಗಿ ಅರ್ಹತೆ ಪಡೆದಿವೆ. ಉಳಿದ ತಂಡಗಳು ಅರ್ಹತಾ ಪಂದ್ಯಗಳ ಮೂಲಕ ಅರ್ಹತೆ ಪಡೆಯುತ್ತವೆ.
ಭಾರತ- ಪಾಕ್ ಮುಖಾಮುಖಿ ಯಾವಾಗ?
ಪುರುಷರ ವಿಭಾಗದಲ್ಲಿ ಹತ್ತು ತಂಡಗಳು ಭಾಗವಹಿಸಲಿದ್ದು, ಮಹಿಳೆಯರ ವಿಭಾಗದಲ್ಲಿ ಎಂಟು ತಂಡಗಳು ಸ್ಪರ್ಧಿಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನೇರವಾಗಿ ಕ್ವಾರ್ಟರ್ ಫೈನಲ್ಗೆ ಮುನ್ನಡೆಯಲಿವೆ. ಆದಾಗ್ಯೂ ಕ್ವಾರ್ಟರ್ ಫೈನಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದಿಲ್ಲ.
ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ
ಎರಡೂ ತಂಡಗಳು ತಮ್ಮ ತಮ್ಮ ಕ್ವಾರ್ಟರ್ ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಗಳನ್ನು ಗೆದ್ದ ನಂತರವೇ ಪರಸ್ಪರ ಮುಖಾಮುಖಿಯಾಗಬಹುದು. ಸರಳವಾಗಿ ಹೇಳುವುದಾದರೆ, ಚಿನ್ನದ ಪದಕ ಪಂದ್ಯ ಅಥವಾ ಫೈನಲ್ ಪಂದ್ಯದಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಬಹುದು. ಅದರಲ್ಲೂ ಎರಡು ತಂಡಗಳು ಫೈನಲ್ಗೆ ಅರ್ಹತೆ ಪಡೆದರೆ ಮಾತ್ರ. ಇಲ್ಲದಿದ್ದರೆ, ಈ ಕ್ರೀಡಾಕೂಟದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯುವುದಿಲ್ಲ. ಈ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಸ್ಪರ್ಧೆಯು ಸೆಪ್ಟೆಂಬರ್ 17 ರಿಂದ 22 ರವರೆಗೆ ನಡೆಯಲಿದ್ದು, ಪುರುಷರ ಸ್ಪರ್ಧೆಯು ಸೆಪ್ಟೆಂಬರ್ 24 ರಂದು ಪ್ರಾರಂಭವಾಗಿ ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಲಿದೆ.