ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲೆರಡು ಆವೃತ್ತಿಗಳಲ್ಲಿ ಫೈನಲ್ಗೇರಿದ್ದ ಭಾರತ ತಂಡ ಆ ಎರಡೂ ಆವೃತ್ತಿಗಳ ಫೈನಲ್ನಲ್ಲಿ ಎಡವಿತ್ತು. ಇನ್ನು ಮೂರನೇ ಆವೃತ್ತಿಯಲ್ಲಿ ಟೀಂ ಇಂಡಿಯಾಕ್ಕೆ ಫೈನಲ್ಗೇರಲು ಸಾಧ್ಯವಾಗಿರಲಿಲ್ಲ. ಇದೀಗ ನಾಲ್ಕನೇ ಆವೃತ್ತಿಯಲ್ಲಾದರೂ ಫೈನಲ್ಗೇರಿ ಚಾಂಪಿಯನ್ ಆಗಬೇಕೆಂಬ ಟೀಂ ಇಂಡಿಯಾದ ಕನಸು ನನಸಾಗುವ ಸಾಧ್ಯತೆಗಳು ಕ್ಷಿಣಿಸುತ್ತಿವೆ. ಆದಾಗ್ಯೂ ಗಿಲ್ ಪಡೆಗೆ ಈಗಲೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರುವ ಅವಕಾಶವಿದೆ. ಹಾಗಿದ್ದರೆ ಭಾರತ ತಂಡ ಡಬ್ಲ್ಯೂಟಿಸಿ ನಾಲ್ಕನೇ ಆವೃತ್ತಿಯ ಫೈನಲ್ಗೇರಲು ಏನು ಮಾಡಬೇಕು? ಉಳಿದಿರುವ ಪಂದ್ಯಗಳಲ್ಲಿ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಪೂರ್ಣ ಲೆಕ್ಕಾಚಾರ ಇಲ್ಲಿದೆ.
ಈ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವು ಇನ್ನೂ ಒಂಬತ್ತು ಪಂದ್ಯಗಳನ್ನು ಆಡಬೇಕಾಗಿದೆ. ಶ್ರೀಲಂಕಾ ನಂತರ, ತಂಡವು ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ ತವರು ಸರಣಿಯನ್ನು ಆಡಲಿದೆ. ಮುಖ್ಯವಾದ ವಿಷಯವೆಂದರೆ ಈ ಎಲ್ಲಾ ಮೂರು ಸರಣಿಗಳ ಪ್ರತಿಯೊಂದು ಪಂದ್ಯವೂ ಟೀಂ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿದೆ. ಪ್ರಸ್ತುತ, ಟೀಂ ಇಂಡಿಯಾ 48.15% ಗೆಲುವಿನ ಶೇಕಡಾವಾರುವಿನೊಂದಿಗೆ ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡವು ಈಗ ಪ್ರತಿ ಪಂದ್ಯವನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 74.07 ಕ್ಕೆ ಏರುತ್ತದೆ.
ಭಾರತ ಫೈನಲ್ಗೇರಬೇಕೆಂದರೆ ಏನು ಮಾಡಬೇಕು?
ಭಾರತ ತಂಡವು ಉಳಿದಿರುವ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಆದಾಗ್ಯೂ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.
ಭಾರತ 7 ಕ್ಕಿಂತ ಕಡಿಮೆ ಪಂದ್ಯಗಳನ್ನು ಗೆದ್ದರೂ ಸಹ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಆದಾಗ್ಯೂ, ಭಾರತ 8 ಅಥವಾ 9 ಪಂದ್ಯಗಳನ್ನು ಗೆದ್ದರೆ, ತಂಡವು ಫೈನಲ್ಗೆ ಸುರಕ್ಷಿತವಾಗಿ ಮತ್ತು ಆರಾಮವಾಗಿ ತಲುಪುತ್ತದೆ. ಆದಾಗ್ಯೂ ಟೀಂ ಇಂಡಿಯಾದ ಮುಂದಿನ ಹಾದಿ ಅಷ್ಟು ಸುಲಭವಲ್ಲ. ಏಕೆಂದರೆ ತಂಡದ ಮುಂದಿನ 4 ಪಂದ್ಯಗಳು ವಿದೇಶಿ ನೆಲದಲ್ಲಿ ನಡೆಯುತ್ತವೆ ಮತ್ತು ಕೊನೆಯ 5 ಪಂದ್ಯಗಳು ನಂಬರ್ 1 ಶ್ರೇಯಾಂಕಿತ ತಂಡವಾದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತವೆ.
ಇದೆಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಟೀಂ ಇಂಡಿಯಾ 7 ಪಂದ್ಯಗಳನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 62.96 ಕ್ಕೆ ಏರಲಿದೆ. ಇತ್ತ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ನ ಶೇಕಡಾವಾರು ಕೂಡ ಕಡಿಮೆಯಾಗಬೇಕಾಗುತ್ತದೆ.
ಭಾರತ 8 ಪಂದ್ಯಗಳನ್ನು ಗೆದ್ದರೆ, ಅದರ ಗೆಲುವಿನ ಶೇಕಡಾವಾರು 68.52 ಕ್ಕೆ ಏರಲಿದೆ. ಒಂದು ವೇಳೆ ಒಂಬತ್ತಕ್ಕೆ 9 ಪಂದ್ಯಗಳನ್ನು ಗೆದ್ದರೆ ಅದರ ಗೆಲುವಿನ ಶೇಕಡಾವಾರು 70 ಕ್ಕೆ ಏರಲಿದೆ. ಇದು ಸಾಧ್ಯವಾದರೆ ಟೀಂ ಇಂಡಿಯಾ ಸುಲಭವಾಗಿ ಫೈನಲ್ಗೇರುತ್ತದೆ.