ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಗಾಲೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಆಗಸ್ಟ್ 23 ರಿಂದ ಕೊಲಂಬೊದಲ್ಲಿ ನಡೆಯಲಿದೆ. ಒಂಬತ್ತು ವರ್ಷಗಳ ನಂತರ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಪಂದ್ಯ ಆಡಲು ಟೀಂ ಇಂಡಿಯಾ (Team India) ಸಜ್ಜಾಗಿದೆ. ಈ ಪ್ರವಾಸಕ್ಕೆ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಟೀಂ ಇಂಡಿಯಾದಲ್ಲಿರುವ 15 ಆಟಗಾರರಲ್ಲಿ ಕೇವಲ ಮೂವರೇ ಮೂವರು ಆಟಗಾರರು ಈ ಹಿಂದೆ ಶ್ರೀಲಂಕಾ ನೆಲದಲ್ಲಿ ಆಡಿದ್ದಾರೆ. ಇದರರ್ಥ ಉಳಿದ 12 ಆಟಗಾರರಿಗೆ ಶ್ರೀಲಂಕಾ ನೆಲದಲ್ಲಿ ಇದು ಚೊಚ್ಚಲ ಟೆಸ್ಟ್ ಸರಣಿಯಾಗಿರಲಿದೆ.
12 ಆಟಗಾರರಿಗೆ ಇದು ಚೊಚ್ಚಲ ಟೆಸ್ಟ್
ಮೇಲೆ ಹೇಳಿದಂತೆ ಭಾರತೀಯ ಟೆಸ್ಟ್ ತಂಡದಲ್ಲಿರುವ 15 ಆಟಗಾರರಲ್ಲಿ 12 ಮಂದಿ ಶ್ರೀಲಂಕಾದಲ್ಲಿ ಎಂದಿಗೂ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಕೆಲವರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಆದರೆ ಯಾರೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ತಂಡದ ನಾಯಕ ಶುಭ್ಮನ್ ಗಿಲ್ ಕೂಡ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಆಡಿದ ಅನುಭವವನ್ನು ಹೊಂದಿಲ್ಲ. 50 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿರುವ ವಿಕೆಟ್ ಕೀಪರ್ ರಿಷಭ್ ಪಂತ್, ಇದುವರೆಗೆ ಶ್ರೀಲಂಕಾದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿಲ್ಲ.
ಈ ಮೂವರು ಮಾತ್ರ ಆಡಿದ್ದಾರೆ
- ಪ್ರಸ್ತುತ ಭಾರತೀಯ ತಂಡದಲ್ಲಿ ಕೇವಲ ಮೂವರು ಆಟಗಾರರಿಗೆ ಮಾತ್ರ ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವವಿದೆ. ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಮಾತ್ರ ಈ ಹಿಂದೆ ಲಂಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
- ಕೆಎಲ್ ರಾಹುಲ್: ಶ್ರೀಲಂಕಾದಲ್ಲಿ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 8 ಇನ್ನಿಂಗ್ಸ್‌ಗಳಲ್ಲಿ 268 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 2 ಅರ್ಧಶತಕಗಳು ಸೇರಿವೆ.
- ರವೀಂದ್ರ ಜಡೇಜಾ: 2 ಟೆಸ್ಟ್‌ಗಳಲ್ಲಿ 2 ಇನ್ನಿಂಗ್ಸ್ಗಳನ್ನು ಆಡಿರುವ ಜಡೇಜಾ 85 ರನ್ ಗಳಿಸಿದ್ದಾರೆ. ಅಲ್ಲದೆ 4 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ (ಒಂದು ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಕೂಡ ಪಡೆದಿದ್ದಾರೆ).
- ಕುಲ್ದೀಪ್ ಯಾದವ್: ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿರುವ ಕುಲ್ದೀಪ್ ಒಟ್ಟು 5 ವಿಕೆಟ್‌ಗಳನ್ನು ಪಡೆದಿದ್ದಾರೆ.
IND vs SL: 16 ವರ್ಷಗಳ ಬಳಿಕ ಈತನಿಲ್ಲದೆ ಟೆಸ್ಟ್ ಆಡಲಿದೆ ಟೀಂ ಇಂಡಿಯಾ
ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸರನ್ಶ್ ಜೈನ್, ಔಕಿಬ್ ನಬಿ, ಸರ್ಫರಾಜ್ ಖಾನ್.
