
ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ, ಮೊದಲ ದಿನದಾಟದ ಎರಡನೇ ಸೆಷನ್ ಅಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿದೆ. ತಂಡದ ಪರ ಇಬ್ಬರು ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಮೊದಲ ಸೆಷನ್ನಲ್ಲಿ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. ಅದಾದ ಬಳಿಕ ಜೊತೆಯಾಗಿರುವ ರಾಹುಲ್ ಹಾಗೂ ಪಡಿಕ್ಕಲ್ ತಂಡವನ್ನು 200 ರನ್ಗಳ ಸನಿಹಕ್ಕೆ ತಂದಿದ್ದಾರೆ. ಚಹಾ ವಿರಾಮದ ವೇಳೆಗೆ ರಾಹುಲ್ 77 ರನ್ ಹಾಗೂ ಪಡಿಕ್ಕಲ್ 84 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.