15 ವರ್ಷಕ್ಕೆ ಅಂತರ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಟೀಂ ಇಂಡಿಯಾದ ಯುವ ಆರಂಭಿ ವೈಭವ್ ಸೂರ್ಯವಂಶಿ ಆಡಿರುವ ಬೆರಳೆಣಿಕೆಯ ಪಂದ್ಯಗಳಲ್ಲಿ ಬರೋಬ್ಬರಿ 2 ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ವೈಭವ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಉತ್ತಮವಾಗಿ ಆರಂಭವಾಗಲಿಲ್ಲ. ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ವಿಫಲವಾದರೂ, ಮುಂದಿನ ಮೂರು ಪಂದ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ, ವೈಭವ್ ತಮ್ಮ ಎರಡನೇ ಅರ್ಧಶತಕವನ್ನು ಬಾರಿಸುವ ಮೂಲಕ ಶತಕದತ್ತ ಸಾಗುತ್ತಿದ್ದರು. ಆದರೆ ಜಿಂಬಾಬ್ವೆ ಫಿಲ್ಡರ್ ಇವಾನ್ಸ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ವೈಭವ್ ಶತಕ ವಂಚಿತರಾಗಬೇಕಾಯಿತು.
ಹರಾರೆಯಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಮ್ಮ ಮತ್ತು ತಮ್ಮ ತಂಡದ ಖಾತೆಯನ್ನು ತೆರೆದರು. ಅದಾದ ನಂತರವೂ ಅವರ ಆಕ್ರಮಣ ಮುಂದುವರೆಯಿತು. ಹೀಗಾಗಿ ವೈಭವ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ತಮ್ಮ ಹೊಡಿಬಡಿ ಆಟವನ್ನು ಮುಂದುವರೆಸಿದ ವೈಭವ್ ಶತಕ ಬಾರಿಸುತ್ತಾರೆ ಎಂದು ತೋರುತ್ತಿತ್ತು. ಆದರೆ ವೆಸ್ಲಿ ಮಾಧೇವೆರೆ ಬೌಲಿಂಗ್‌ನಲ್ಲಿ ಸಿಕ್ಸರ್ ಹೊಡೆಯುವ ಪ್ರಯತ್ನದಲ್ಲಿ ಕ್ಯಾಚ್ ನೀಡಿ ಔಟಾದರು. ಲಾಂಗ್-ಆಫ್‌ನಿಂದ ಓಡಿ ಬಂದ ಬ್ರಾಡ್ ಇವಾನ್ಸ್ ಅದ್ಭುತ ಡೈವಿಂಗ್ ಕ್ಯಾಚ್ ಪಡೆದರು. ವೈಭವ್ ಕೇವಲ 40 ಎಸೆತಗಳಲ್ಲಿ 81 ರನ್ ಗಳಿಸಿದರು, ಇದರಲ್ಲಿ 8 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು.
