ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ 2026 ರ ಟಿ20 ವಿಶ್ವಕಪ್ನ ಸೂಪರ್ 8 ಸುತ್ತಿನಲ್ಲಿ ಆತಿಥೇಯ ಟೀಂ ಇಂಡಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ. ಇದು ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಜಿಂಬಾಬ್ವೆಯ ಮೊದಲ ಟಿ20 ಪಂದ್ಯವಾಗಿದೆ. ಸೂಪರ್ 8 ಸುತ್ತಿನಲ್ಲಿ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದ್ದು, ಉಭಯ ತಂಡಗಳು ಆಡಿರುವ ಮೊದಲ ಪಂದ್ಯದಲ್ಲಿ ಸೋತಿವೆ. ಹೀಗಾಗಿ ಸೆಮಿಫೈನಲ್ ಕನಸು ಜೀವಂತವಾಗಿರಬೇಕೆಂದರೆ, ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಅವಶ್ಯಕವಾಗಿದೆ. ಅದರಲ್ಲೂ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತವರಿನಲ್ಲಿ ತನ್ನ ಪ್ರತಿಷ್ಠೆ ಉಳಿಸಿಕೊಳ್ಳಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಟಾಸ್ ಗೆದ್ದ ಜಿಂಬಾಬ್ವೆ
ಇನ್ನು ಈ ನಿರ್ಣಾಯಕ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಜಾ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಜಿಂಬಾಬ್ವೆ ತಂಡದಲ್ಲಿ ಒಂದು ಬದಲಾವಣೆಯಾಗಿದ್ದರೆ, ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳಾಗಿವೆ. ಇಂದಿನ ಪಂದ್ಯದಿಂದ ರಿಂಕು ಸಿಂಗ್ ಹಾಗೂ ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದರೆ, ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಆಡುತ್ತಿದ್ದಾರೆ.
ಮುಖಾಮುಖಿ ದಾಖಲೆ
ಇದು ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಜಿಂಬಾಬ್ವೆಯ ಎರಡನೇ ಮುಖಾಮುಖಿಯಾಗಲಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಮೆಲ್ಬೋರ್ನ್‌ನಲ್ಲಿ ನಡೆದ ಆ ಪಂದ್ಯವನ್ನು ಭಾರತ 71 ರನ್‌ಗಳಿಂದ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 61 ರನ್ ಬಾರಿಸಿದ್ದರು. ಹಾಗೆಯೇ ಜಿಂಬಾಬ್ವೆ ತಂಡವು ಭಾರತದ ವಿರುದ್ಧ ಭಾರತದ ನೆಲದಲ್ಲಿ 24 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ಏಕದಿನ ಪಂದ್ಯಗಳು ಮತ್ತು ಐದು ಟೆಸ್ಟ್ ಪಂದ್ಯಗಳು ಸೇರಿವೆ.
ಉಭಯ ತಂಡಗಳು
ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಜಿಂಬಾಬ್ವೆ ತಂಡ: ತಡಿವಾನಾಶೆ ಮಾರುಮಣಿ (ವಿಕೆಟ್‌ಕೀಪರ್), ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ರಿಯಾನ್ ಬರ್ಲ್, ಸಿಕಂದರ್ ರಜಾ (ನಾಯಕ), ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ರಾಡ್ ಇವಾನ್ಸ್, ಟಿನೊಟೆಂಡಾ ಮಪೋಸಾ, ಬ್ಲೆಸಿಂಗ್ ಮುಜರಬಾನಿ, ರಿಚರ್ಡ್ ನಾಗರವಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:49 pm, Thu, 26 February 26
