ಸ್ವಾತಂತ್ರ್ಯ ದಿನಾಚರಣೆImage Credit source: PTI
ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ(Independence Day)ಯನ್ನು ಆಚರಿಸುತ್ತದೆ. 1947ರ ಆಗಸ್ಟ್ 15ರಂದು ಸುಮಾರು ಎರಡು ಶತಮಾನಗಳ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದು ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿತು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಹೋರಾಟಗಾರರ ತ್ಯಾಗ ಮತ್ತು ಹೋರಾಟವನ್ನು ಸ್ಮರಿಸುವ ಈ ದಿನಂದು ದೇಶಾದ್ಯಂತ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ರಾಷ್ಟ್ರಧ್ವಜ ಹಾರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡುವುದು ಸ್ವಾತಂತ್ರ್ಯ ದಿನದ ಪ್ರಮುಖ ಆಚರಣೆಯಾಗಿದೆ.
ಸ್ವಾತಂತ್ರ್ಯ ದಿನದ ಮಹತ್ವವೇನು?
1947ರ ಆಗಸ್ಟ್ 15ರಂದು ಭಾರತ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಹಾಗೂ ಬಳಿಕ ಬ್ರಿಟಿಷ್ ಸಾಮ್ರಾಜ್ಯದ ವಸಾಹತುಶಾಹಿ ಆಡಳಿತದಿಂದ ಮುಕ್ತವಾಯಿತು. ಹೀಗಾಗಿ ಈ ದಿನವು ದೇಶದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಲಕ್ಷಾಂತರ ಹೋರಾಟಗಾರರನ್ನು ಈ ದಿನದಂದು ದೇಶ ಸ್ಮರಿಸುತ್ತದೆ.
ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಲು ಇಲ್ಲಿವೆ ಸಂದೇಶಗಳು
ಬ್ರಿಟಿಷರ ಆಳ್ವಿಕೆ ಹೇಗೆ ಆರಂಭವಾಯಿತು?
ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಕ್ರಮೇಣ ದೇಶದ ರಾಜಕೀಯ ಮತ್ತು ಆಡಳಿತದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿತು. ವಿವಿಧ ಯುದ್ಧಗಳು ಮತ್ತು ರಾಜಕೀಯ ತಂತ್ರಗಳ ಮೂಲಕ ಭಾರತದ ಹಲವು ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿತು. ನಂತರ ಬ್ರಿಟಿಷ್ ಕ್ರೌನ್ ನೇರವಾಗಿ ಭಾರತದ ಆಡಳಿತವನ್ನು ವಹಿಸಿಕೊಂಡು ವಸಾಹತುಶಾಹಿ ಆಡಳಿತವನ್ನು ಮುಂದುವರಿಸಿತು.
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಬ್ರಿಟಿಷರ ಆಡಳಿತದ ವಿರುದ್ಧ 1857ರಲ್ಲಿ ನಡೆದ ಸಶಸ್ತ್ರ ದಂಗೆ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಮಂಗಲ್ ಪಾಂಡೆ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವರು ಬ್ರಿಟಿಷರ ವಿರುದ್ಧ ಹೋರಾಡಿದರು. ಈ ಹೋರಾಟವು ದೇಶದ ವಿವಿಧ ಭಾಗಗಳಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಅಸಮಾಧಾನ ಮತ್ತು ಪ್ರತಿರೋಧಕ್ಕೆ ಹೊಸ ದಿಕ್ಕು ನೀಡಿತು.
ಗಾಂಧೀಜಿಯವರ ಅಹಿಂಸಾ ಹೋರಾಟ
20ನೇ ಶತಮಾನದಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಹೊಸ ರೂಪ ದೊರೆಯಿತು. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷ್ ಆಡಳಿತವನ್ನು ವಿರೋಧಿಸುವ ಚಳುವಳಿಗಳು ದೇಶಾದ್ಯಂತ ವ್ಯಾಪಿಸಿದವು. ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳುವಳಿಗಳು ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳಾಗಿವೆ. ಈ ಚಳುವಳಿಗಳ ಮೂಲಕ ಲಕ್ಷಾಂತರ ಭಾರತೀಯರು ಬ್ರಿಟಿಷರ ವಿರುದ್ಧ ಒಗ್ಗೂಡಿದರು.
ಕ್ರಾಂತಿಕಾರಿಗಳ ಕೊಡುಗೆ
ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ಚಳುವಳಿಗಳ ಜೊತೆಗೆ ಕ್ರಾಂತಿಕಾರಿಗಳ ಹೋರಾಟವೂ ಪ್ರಮುಖ ಪಾತ್ರ ವಹಿಸಿತು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಮತ್ತು ಲಾಲಾ ಲಜಪತ್ ರಾಯ್ ಸೇರಿದಂತೆ ಅನೇಕ ನಾಯಕರು ಬ್ರಿಟಿಷರ ವಿರುದ್ಧ ಹೋರಾಡಿದರು. ವಿಶೇಷವಾಗಿ ಯುವಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವಲ್ಲಿ ಕ್ರಾಂತಿಕಾರಿಗಳ ಹೋರಾಟ ಮಹತ್ವದ ಪಾತ್ರ ವಹಿಸಿತು. ಅನೇಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.
ಆಗಸ್ಟ್ 15ರಂದೇ ಸ್ವಾತಂತ್ರ್ಯ ಏಕೆ?
ಭಾರತಕ್ಕೆ ಸ್ವಾತಂತ್ರ್ಯ ನೀಡುವ ಯೋಜನೆಯನ್ನು ಬ್ರಿಟಿಷ್ ಸರ್ಕಾರದ ಪರವಾಗಿ ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು 1947ರ ಜೂನ್ 3ರಂದು ಘೋಷಿಸಿದರು. ಭಾರತ ವಿಭಜನೆಯೊಂದಿಗೆ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ಅಂತಿಮದ ಜೊತೆಗೆ, ಸ್ವಾತಂತ್ರ್ಯಕ್ಕಾಗಿ ಆಗಸ್ಟ್ 15, 1947ರ ದಿನಾಂಕವನ್ನು ಆಯ್ಕೆ ಮಾಡಲಾಯಿತು. ಮೌಂಟ್‌ಬ್ಯಾಟನ್ ಅವರು 1945ರ ಆಗಸ್ಟ್ 15ರಂದು ಜಪಾನ್ ಮಿತ್ರರಾಷ್ಟ್ರಗಳಿಗೆ ಶರಣಾದ ದಿನವನ್ನು ತಮ್ಮ ಸೇನಾ ಸೇವೆಯ ಪ್ರಮುಖ ಘಟನೆಯಾಗಿ ಪರಿಗಣಿಸಿದ್ದರು. ಇದೇ ದಿನಾಂಕದೊಂದಿಗೆ ಸಂಬಂಧ ಹೊಂದಿದ್ದರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರಿಸಲು ಆಗಸ್ಟ್ 15ರ ದಿನವನ್ನು ಆಯ್ಕೆ ಮಾಡಲಾಯಿತು ಎಂಬುದು ಇತಿಹಾಸ.
ಸ್ವಾತಂತ್ರ್ಯ ದಿನವು ಕೇವಲ ರಾಷ್ಟ್ರೀಯ ರಜಾದಿನವಲ್ಲ. ಇದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ಮತ್ತು ರಾಷ್ಟ್ರದ ಏಕತೆ, ಸಾರ್ವಭೌಮತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪುನರುಚ್ಚರಿಸುವ ದಿನವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
