Indian Army Recruitment 2026: ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ನೇಮಕಾತಿ! – Kannada News | Indian Army SSC Tech Recruitment 2026: Engineering Graduates, Apply Now for Officer Jobs!

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶImage Credit source: Getty Images

ದೇಶಸೇವೆ ಮಾಡಬೇಕೆಂಬ ಕನಸು ಹೊತ್ತಿರುವ ಇಂಜಿನಿಯರಿಂಗ್ ಪದವೀಧರರಿಗೆ ಭಾರತೀಯ ಸೇನೆಯು (Indian Army) ಸುವರ್ಣ ಅವಕಾಶವೊಂದನ್ನು ತಂದಿದೆ. ಏಪ್ರಿಲ್ 2027 ರಿಂದ ಪ್ರಾರಂಭವಾಗಲಿರುವ 68 ನೇ ಶಾರ್ಟ್ ಸರ್ವಿಸ್ ಕಮಿಷನ್ – SSC (Tech) ಕೋರ್ಸ್‌ಗೆ ಸೇರಲು ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಿ-ಕಮಿಷನಿಂಗ್ ಟ್ರೈನಿಂಗ್ ಅಕಾಡೆಮಿ (PCTA) ಯಲ್ಲಿ ತರಬೇತಿ ನೀಡಲಾಗುತ್ತದೆ.

ಅರ್ಹ ಇಂಜಿನಿಯರಿಂಗ್ ವಿಭಾಗಗಳು ಮತ್ತು ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಇ (BE) ಅಥವಾ ಬಿಟೆಕ್ (B.Tech) ಪದವಿ ಪೂರ್ಣಗೊಳಿಸಿರಬೇಕು. ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಮೆಕ್ಯಾನಿಕಲ್ ಹಾಗೂ ಎಂಐಎಸ್ಸಿ (MISC) ಇಂಜಿನಿಯರಿಂಗ್ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ಪ್ರಸ್ತುತ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅವರು ಸೇನೆ ನಿಗದಿಪಡಿಸಿದ ದಿನಾಂಕದೊಳಗೆ ತಮ್ಮ ಪದವಿ ಪೂರ್ಣಗೊಳಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ವಯೋಮಿತಿ ಮತ್ತು ದೈಹಿಕ ಮಾನದಂಡಗಳು:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2027 ರ ಹೊತ್ತಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 27 ವರ್ಷಗಳ ಒಳಗಿರಬೇಕು. ಅಂದರೆ, ಅಭ್ಯರ್ಥಿಗಳು ಏಪ್ರಿಲ್ 1, 2000 ಮತ್ತು ಏಪ್ರಿಲ್ 1, 2007 ರ ನಡುವೆ ಜನಿಸಿರಬೇಕಾಗುತ್ತದೆ. ಇದರೊಂದಿಗೆ, ಭಾರತೀಯ ಸೇನೆಯು ಅಧಿಕೃತ ಅಧಿಸೂಚನೆಯಲ್ಲಿ ಸೂಚಿಸಿರುವ ನಿಗದಿತ ದೈಹಿಕ ಮತ್ತು ಆರೋಗ್ಯ ಮಾನದಂಡಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕು.

ಆಕರ್ಷಕ ವೇತನ ಶ್ರೇಣಿ ಮತ್ತು ಸ್ಟೈಫಂಡ್ ವಿವರಗಳು:

ಭಾರತೀಯ ಸೇನೆಯ ಈ ತಾಂತ್ರಿಕ ವಿಭಾಗಕ್ಕೆ ಆಯ್ಕೆಯಾಗುವ ಯುವಕರಿಗೆ ಅತ್ಯುತ್ತಮ ವೇತನದ ಸೌಲಭ್ಯವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 56,100 ರಿಂದ ರೂ. 1,77,500 ರವರೆಗೆ ವೇತನ ಶ್ರೇಣಿ ಸಿಗಲಿದೆ. ವಿಶೇಷವೆಂದರೆ, ತರಬೇತಿಯ ಅವಧಿಯಲ್ಲಿಯೇ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 56,100 ಗಳ ಸ್ಟೈಫಂಡ್ ಕೂಡ ನೀಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!

ಯಾವುದೇ ಪರೀಕ್ಷೆಯಿಲ್ಲದೆ ಸುಲಭ ಆಯ್ಕೆ ಪ್ರಕ್ರಿಯೆ:

ಈ ನೇಮಕಾತಿಯ ಪ್ರಮುಖ ಆಕರ್ಷಣೆ ಎಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಅವರ ಇಂಜಿನಿಯರಿಂಗ್ ಪದವಿಯ ಅಂಕಗಳ ಆಧಾರದ ಮೇಲೆ ಮೊದಲು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ನೇರವಾಗಿ ಎಸ್‌ಎಸ್‌ಬಿ (SSB – Services Selection Board) ಸಂದರ್ಶನವನ್ನು ನಡೆಸುವ ಮೂಲಕ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ಹಾಗೂ ಆಸಕ್ತ ಅವಿವಾಹಿತ ಪುರುಷ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *