ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಸಲುವಾಗಿಯೇ 2026 ರ ಐಪಿಎಲ್ ಅಖಾಡಕ್ಕೆ ಧುಮುಕ್ಕಿದ್ದ ಆರ್ಸಿಬಿ ಕೊನೆಗೂ ತನ್ನ ಗುರಿಯನ್ನು ಮುಟ್ಟಿದೆ. ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಇಡೀ ಸೀಸನ್ ಉದ್ದಕ್ಕೂ ಅಲ್ಲಲ್ಲಿ ಕೊಂಚ ಎಡವಿದ್ದನ್ನು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲಿ ಆರ್ಸಿಬಿ ಪಾರುಪತ್ಯ ಮೆರೆದಿತ್ತು. ಅದರಲ್ಲೂ ಲೀಗ್ ಹಂತದಲ್ಲಿ ಆಡಿದ14 ಲೀಗ್ ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದ ಆರ್ಸಿಬಿ, ಪ್ಲೇಆಫ್ನಲ್ಲಿ ಕ್ವಾಲಿಫೈಯರ್ 1 ಮತ್ತು ಫೈನಲ್ ಪಂದ್ಯವನ್ನು ಗೆದ್ದು ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು ತಂಡದ ಈ ಸಾಧನೆಗೆ ಸಂಘಟಿತ ಹೋರಾಟವೇ ಕಾರಣವಾಗಿತ್ತು.
ಈ ಆವೃತ್ತಿಯಲ್ಲಿ ಆರ್ಸಿಬಿ ಸೋತಿದ್ದು, ಕೇವಲ ಐದು ಪಂದ್ಯಗಳನ್ನು ಮಾತ್ರ. ಆದಾಗ್ಯೂ ಆರ್ಸಿಬಿ ಪರ ಇದೇ ಮೊದಲ ಬಾರಿಗೆ ಐಪಿಎಲ್ ಆಡಿದ್ದ ನ್ಯೂಜಿಲೆಂಡ್ನ ವೇಗದ ಬೌಲರ್ ಜಾಕೋಬ್ ಡಫ್ಫಿಗೆ ಈ ಆವೃತ್ತಿಯಲ್ಲಿ ಒಂದೇ ಒಂದು ಸೋಲನ್ನು ಎದುರಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಮೇಲೆ ಹೇಳಿದಂತೆ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಡಫ್ಫಿ ಚೊಚ್ಚಲ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಟ್ರೋಫಿ ಎತ್ತಿಹಿಡಿಯುವ ಮೂಲಕ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು.
ಆರಕ್ಕೆ ಆರು ಪಂದ್ಯಗಳಲ್ಲೂ ಜಯ
ಜಾಕೋಬ್ ಡಫಿ ಐಪಿಎಲ್ 2026 ರಲ್ಲಿ ಫೈನಲ್ ಸೇರಿದಂತೆ ಆರು ಪಂದ್ಯಗಳನ್ನು ಆಡಿದರು. ಅವರು ಆಡಿದ ಪ್ರತಿ ಪಂದ್ಯದಲ್ಲೂ ಆರ್ಸಿಬಿ ಗೆಲುವು ಸಾಧಿಸಿತು. ಈ ಮೂಲಕ ಡಫ್ಫಿ ಒಂದೇ ಒಂದು ಪಂದ್ಯವನ್ನು ಸೋಲದೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಆರ್ಸಿಬಿ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದರು. ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಆರಂಭ ಪಡೆದ ಡಫ್ಫಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಲೀಗ್ನ ಮೊದಲ ಪಂದ್ಯದಲ್ಲಿ 22 ರನ್ ನೀಡಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆ ನಂತರ ಸಿಎಸ್ಕೆ ವಿರುದ್ಧ ನಡೆದ ಮುಂದಿನ ಪಂದ್ಯದಲ್ಲಿಯೂ 2 ವಿಕೆಟ್ ಕಬಳಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ಪಡೆದ ಡಫ್ಫಿಗೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಯಾವುದೇ ವಿಕೆಟ್ ಸಿಗಲಿಲ್ಲ. ಆದಾಗ್ಯೂ, ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 1 ರಲ್ಲಿ ಮತ್ತೆ ಆಡುವ ಅವಕಾಶ ಪಡೆದಿದ್ದ ಡಫ್ಫಿ 3 ವಿಕೆಟ್ ಕಬಳಿಸಿದರು. ಅದಾದ ಬಳಿಕ ನಡೆದ ಫೈನಲ್ ಪಂದ್ಯದಲ್ಲಿ ಡಫ್ಫಿಗೆ ವಿಕೆಟ್ ಸಿಗಲಿಲ್ಲ. ಆದಾಗ್ಯೂ ಉಳಿದವರ ಪ್ರದರ್ಶನದಿಂದಾಗಿ ಆರ್ಸಿಬಿ ಕಪ್ ಗೆದ್ದುಕೊಂಡಿತು. ಇನ್ನು ಈ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ಡಫ್ಫಿ 9 ವಿಕೆಟ್ ಕಬಳಿಸಿದರು.
ಜಾಕೋಬ್ ಡಫ್ಫಿ ವೃತ್ತಿಜೀವನ
ಜಾಕೋಬ್ ಡಫ್ಫಿ ಟಿ20 ಕ್ರಿಕೆಟ್ನಲ್ಲಿ ನಂಬರ್ ಒನ್ ಬೌಲರ್ ಕೂಡ ಆಗಿದ್ದಾರೆ. ಆಡಿರುವ 48 ಪಂದ್ಯಗಳಲ್ಲಿ 62 ವಿಕೆಟ್ಗಳನ್ನು ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಡಫ್ಫಿ ಆಡಿರುವ 19 ಪಂದ್ಯಗಳಲ್ಲಿ 35 ವಿಕೆಟ್ಗಳನ್ನು ಪಡೆದಿದ್ದು, ಟೆಸ್ಟ್ ಕ್ರಿಕೆಟ್ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 25 ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ 9 ವಿಕೆಟ್ಗಳನ್ನು ಪಡೆದಿರುವುದರ ಜೊತೆಗೆ, ದಿ ಹಂಡ್ರೆಡ್ ಲೀಗ್ನಲ್ಲಿ 8 ವಿಕೆಟ್ಗಳು ಮತ್ತು ಟಿ20 ಬ್ಲಾಸ್ಟ್ನಲ್ಲಿ 10 ವಿಕೆಟ್ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ