ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಸಂತಸದಲ್ಲಿದ್ದ ಆರ್ಸಿಬಿ ತಂಡಕ್ಕೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ಟಿಮ್ ಡೇವಿಡ್ಗೆ ಬಿಸಿಸಿಐ ಒಂದು ಪಂದ್ಯದಿಂದ ನಿಷೇಧದ ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಪಂದ್ಯ ಶುಲ್ಕವನ್ನು ಕಡಿತಗೊಳಿಸಲಾಗಿದ್ದು, 2 ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ. ಇದರನ್ವಯ ಟಿಮ್ ಡೇವಿಡ್ 2027 ರ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಮೊದಲ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ.
ಅಷ್ಟಕ್ಕೂ ಟಿಮ್ ಡೇವಿಡ್ ವಿರುದ್ಧ ಬಿಸಿಸಿಐ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಕಾರಣವೆನೆಂದರೆ, ಗುಜರಾತ್ ವಿರುದ್ಧದ ಫೈನಲ್ ಪಂದ್ಯದ ವೇಳೆ ಟಿಮ್ ಡೇವಿಡ್ ಕೋಪದಿಂದ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದಿದ್ದರು. ಟಿಮ್ ಡೇವಿಡ್ ಅವರ ಈ ಕೃತ್ಯ ಐಪಿಎಲ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಕಾರಣ ಆಸ್ಟ್ರೇಲಿಯಾದ ಈ ಸ್ಟಾರ್ ಬ್ಯಾಟ್ಸ್ಮನ್ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಿದೆ.
ದಂಡದ ಜೊತೆಗೆ ಡಿಮೆರಿಟ್ ಅಂಕ
ವಾಸ್ತವವಾಗಿ ಟಿಮ್ ಡೇವಿಡ್, ಗುಜರಾತ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಇನ್ನಿಂಗ್ಸ್ನ 10 ನೇ ಓವರ್ನಲ್ಲಿ ಆನ್-ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮೇಲೆ ಐಸ್ ಪ್ಯಾಕ್ ಎಸೆದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.9 ರ ಉಲ್ಲಂಘನೆಯಾಗಿದೆ. ಪಂದ್ಯದ ಸಮಯದಲ್ಲಿ ಆಟಗಾರ, ತಂಡದ ಅಧಿಕಾರಿ, ಅಂಪೈರ್, ಪಂದ್ಯದ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯ ಕಡೆಗೆ ಆಕ್ರಮಣಕಾರಿ ಅಥವಾ ಅಪಾಯಕಾರಿ ರೀತಿಯಲ್ಲಿ ಚೆಂಡು ಅಥವಾ ಕ್ರಿಕೆಟ್ ಸಾಮಗ್ರಿಯನ್ನು (ನೀರಿನ ಬಾಟಲ್, ಇತ್ಯಾದಿ) ಎಸೆಯುವುದು ಈ ನಿಯಮದ ಉಲ್ಲಂಘನೆಯಾಗಲಿದೆ. ಹೀಗಾಗಿ ಬಿಸಿಸಿಐ, ಟಿಮ್ ಡೇವಿಡ್ ಅವರ ಪಂದ್ಯ ಶುಲ್ಕದ 50 ಪ್ರತಿಶತ ಮೊತ್ತವನ್ನು ದಂಡವಾಗಿ ವಿಧಿಸಿದ್ದು, ಎರಡು ಡಿಮೆರಿಟ್ ಅಂಕಗಳನ್ನು ನೀಡಿದೆ.
ಒಂದು ಪಂದ್ಯದಿಂದ ನಿಷೇಧ
ಈ ಆವೃತ್ತಿಯಲ್ಲಿ ಟಿಮ್ ಡೇವಿಡ್ ಬಿಸಿಸಿಐನಿಂದ ದಂಡನೆಗೆ ಗುರಿಯಾಗುತ್ತಿರುವುದು ಇದು ಮೂರನೇ ಬಾರಿಗೆ. ಇದಕ್ಕೂ ಮೊದಲು, ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಯಮ ಉಲ್ಲಂಘಸಿದ್ದ ಡೇವಿಡ್ಗೆ ಒಂದು ಡಿಮೆರಿಟ್ ಪಾಯಿಂಟ್ ಅಂಕ ನೀಡಿತ್ತು. ಇದಾದ ಬಳಿಕ ಅದೇ ಮುಂಬೈ ವಿರುದ್ಧ ನಡೆದಿದ್ದ 54 ನೇ ಪಂದ್ಯದಲ್ಲಿ ಇದೇ ರೀತಿ ಮಾಡಿದ್ದ ಟಿಮ್ಗೆ ಎರಡು ಡಿಮೆರಿಟ್ ಪಾಯಿಂಟ್ಗಳನ್ನು ನೀಡಿತ್ತು. ಒಟ್ಟಾರೆಯಾಗಿ ಮೂರು ಪಂದ್ಯಗಳಿಂದ ಟಿಮ್ ಐದು ಡಿಮೆರಿಟ್ ಅಂಕಗಳನ್ನು ಪಡೆದಿದ್ದಾರೆ. ಹೀಗಾಗಿ ನಿಯಮಗಳ ಪ್ರಕಾರ ಟಿಮ್ ಅವರನ್ನು ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.
ಈ ಆವೃತ್ತಿಯಲ್ಲಿ ಟಿಮ್ ಪ್ರದರ್ಶನ
ಟಿಮ್ ಡೇವಿಡ್ ಸತತ ಎರಡನೇ ಬಾರಿಗೆ ಆರ್ಸಿಬಿ ಚಾಂಪಿಯನ್ ತಂಡದ ಭಾಗವಾಗಿದ್ದ್ದಾರೆ. ಫೈನಲ್ ಪಂದ್ಯದಲ್ಲಿ ನಿರ್ಣಾಯಕ 24 ರನ್ ಬಾರಿಸಿದ್ದ ಟಿಮ್ ಡೇವಿಡ್ ಆಡಿದ 16 ಪಂದ್ಯಗಳಲ್ಲಿ 33.88 ಸರಾಸರಿಯಲ್ಲಿ 305 ರನ್ ಬಾರಿಸಿದರು. ಇದರಲ್ಲಿ 23 ಸಿಕ್ಸರ್ಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
