ಎದುರಾಗಿದ್ದ ಅಡೆತಡೆಗಳೆಲ್ಲವನ್ನು ಮೆಟ್ಟಿ ನಿಂತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026 ರ ಐಪಿಎಲ್ನ (IPL 2026) ಉದ್ಘಾಟನಾ ಪಂದ್ಯವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಆ ಬಳಿಕ ನಡೆದ ಉಳಿದ ನಾಲ್ಕು ಲೀಗ್ ಪಂದ್ಯಗಳು ಕೂಡ ಯಾವುದೇ ಲೋಪದೋಷಗಳಿಲ್ಲದೆ ಮುಗಿದಿದ್ದವು. ಹೀಗಾಗಿ ಈ ಮೊದಲು ವರದಿಯಾದ ಪ್ರಕಾರ, ಈ ಆವೃತ್ತಿಯ ಫೈನಲ್ ಪಂದ್ಯಕ್ಕೂ ಬೆಂಗಳೂರು ಆತಿಥ್ಯವಹಿಸುವುದು ಖಚಿತ ಎನ್ನಲಾಗುತಿತ್ತು. ಆದರೆ ಲೀಗ್ ಹಂತ ಮುಗಿಯುವ ಹಂತದಲ್ಲಿರುವಾಗ ಪ್ಲೇ ಆಫ್ ಸುತ್ತಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ, ಕನ್ನಡಿಗರಿಗೆ ಹಾಗೂ ಆರ್‌ಸಿಬಿ ಫ್ಯಾನ್ಸ್ಗೆ ಬಿಗ್ ಶಾಕ್ ನೀಡಿದೆ. ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನ ಬದಲಿಗೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium Ahmedabad) ನಡೆಸಲು ತೀರ್ಮಾನಿಸಲಾಗಿದೆ. ತನ್ನ ನಿರ್ಧಾರದ ಹಿಂದಿರುವ ಕಾರಣವನ್ನು ಸಹ ಬಿಸಿಸಿಐ ಬಹಿರಂಗಪಡಿಸಿದೆ.
ಹೇಳಿಕೆ ಬಿಡುಗಡೆ ಮಾಡಿದ ಬಿಸಿಸಿಐ
ಪ್ಲೇಆಫ್ ಸುತ್ತಿನ ವೇಳಾಪಟ್ಟಿಯನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ, 2026ರ ಐಪಿಎಲ್ನ ಪ್ಲೇಆಫ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, 70 ಲೀಗ್ ಪಂದ್ಯಗಳು ಮುಗಿದ ಬಳಿಕ ಈ ಸುತ್ತು ಆರಂಭವಾಗಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ತಂಡಗಳು ಮೇ 26 ರಂದು ಧರ್ಮಶಾಲಾದ HPCA ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ಗೇರಲಿದೆ.
ಆ ನಂತರ ಮೇ 27 ರಂದು ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯ ನ್ಯೂ ಚಂಡೀಗಢದ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಇದೇ ಮೈದಾನದಲ್ಲಿ ಎಲಿಮಿನೇಟರ್ 2 ಪಂದ್ಯ ನಡೆಯಲಿದ್ದು, ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಮೇ 31 ರಂದು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕ್ವಾಲಿಫೈಯರ್ 1 ಗೆದ್ದ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ ಎಂದಿದೆ.
🚨 News 🚨
BCCI Announces #TATAIPL 2026 Playoffs Schedule
Qualifier 1: Dharamshala
Eliminator and Qualifier 2: New Chandigarh
Narendra Modi Stadium, Ahmedabad to Host Grand Finale 🏟️
More Details ▶️ https://t.co/32HvsabiuF#KhelBindaas pic.twitter.com/ItrNUNoxHZ
— IndianPremierLeague (@IPL) May 6, 2026
ಶಿಷ್ಟಾಚಾರದ ಉಲ್ಲಂಘನೆ
ಇದರ ಜೊತೆಗೆ ಫೈನಲ್ ಪಂದ್ಯವನ್ನು ಸ್ಥಳಾಂತರಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಿರುವ ಬಿಸಿಸಿಐ, ‘ಈ ಮೊದಲು ಬೆಂಗಳೂರಿನಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ಗೊತ್ತುಪಡಿಸಲಾಗಿತ್ತು. ಆದರೆ ಸ್ಥಳೀಯ ಸಂಘ ಮತ್ತು ಅಧಿಕಾರಿಗಳು ಬಿಸಿಸಿಐನ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳಿಗೆ ವಿರುದ್ಧವಾದ ಕೆಲವು ಅವಶ್ಯಕತೆಗಳನ್ನು ಹೊಂದಿದ್ದರು. ಆದ್ದರಿಂದ, ಫೈನಲ್ ಪಂದ್ಯವನ್ನು ಸ್ಥಳಾಂತರಿಸುವುದು ಏಕೈಕ ಆಯ್ಕೆಯಾಗಿತ್ತು’ ಎಂದಿದೆ.
LSG vs RCB Live Streaming: ವಾರದ ಬಳಿಕ ಕಣಕ್ಕಿಳಿಯುತ್ತಿದೆ ಆರ್‌ಸಿಬಿ; ಪಂದ್ಯ ಎಷ್ಟು ಗಂಟೆಗೆ ಆರಂಭ?
ಟಿಕೆಟ್ಗಳಿಗಾಗಿ ಶಾಸಕರ ಬೇಡಿಕೆ
ವಾಸ್ತವವಾಗಿ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ನಡುವಿನ ಐಪಿಎಲ್ 2026 ರ ಉದ್ಘಾಟನಾ ಪಂದ್ಯಕ್ಕೂ ಮುನ್ನ, ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು, ಶಾಸಕರು ಸಾರ್ವಜನಿಕರಂತೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ಶಾಸಕರಿಗೂ ಪಂದ್ಯಗಳಿಗೆ ಕನಿಷ್ಠ ಐದು ಟಿಕೆಟ್‌ಗಳನ್ನು ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.
ಇದಾದ ನಂತರ, ಕೆಎಸ್ಸಿಎ ಜೊತೆಗೆ ಸಭೆ ನಡೆಸಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿ ಶಾಸಕರು ಮತ್ತು ಸಂಸದರಿಗೆ ಆರ್‌ಸಿಬಿ ಪಂದ್ಯಗಳಿಗೆ ಐದು ಟಿಕೆಟ್‌ಗಳ ಬದಲಿಗೆ ಮೂರು ಟಿಕೆಟ್‌ಗಳನ್ನು ನೀಡುವ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದರು. ಅದರಂತೆ ಬೆಂಗಳೂರಿನಲ್ಲಿ ನಡೆದ ಎಲ್ಲಾ ಪಂದ್ಯಗಳಿಗೂ ಶಾಸಕರು ಮತ್ತು ಸಂಸದರಿಗೆ ಮೂರು ಟಿಕೆಟ್‌ಗಳನ್ನು ನೀಡಲಾಗಿತ್ತು. ಇದನ್ನು ತನ್ನ ಹೇಳಿಕೆಯಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ಪ್ರಮುಖ ಕಾರಣ ಎಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:01 pm, Wed, 6 May 26
