ಐಪಿಎಲ್ 2026ರ ನಂತರ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮಕ್ಕೆ ಕೊನೆ ಹಾಡಲಾಗುತ್ತದೆಯೇ? ಈ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉತ್ತರ ನೀಡಿದ್ದಾರೆ. ಸದ್ಯದ ಕ್ರಿಕೆಟ್ ವೇಗಕ್ಕೆ ಹೊಸ ಆಯಾಮ ನೀಡಿರುವ ಈ ನಿಯಮದ ಪರ-ವಿರೋಧ ಚರ್ಚೆಗಳ ನಡುವೆ, ಮಂಡಳಿಯ ಮುಂದಿನ ನಡೆಯೇನು ಎಂಬುದು ಈಗ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಈ ಕುರಿತು ಬಿಸಿಸಿಐನಿಂದ ಸಿಕ್ಕಿರುವ ಮಾಹಿತಿ ಈ ಕೆಳಗಿನಂತಿದೆ…
- ತಕ್ಷಣದ ಬದಲಾವಣೆ ಇಲ್ಲ: ಪ್ರಸಕ್ತ ಸೀಸನ್ನ ಮಧ್ಯದಲ್ಲಿ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದವರೆಗೆ ಹಾಲಿ ನಿಯಮವೇ ಮುಂದುವರಿಯಲಿದೆ.
- ಫ್ರಾಂಚೈಸಿಗಳಿಂದ ದೂರುಗಳಿಲ್ಲ: ಮಾಧ್ಯಮಗಳಲ್ಲಿ ಮತ್ತು ಆಟಗಾರರಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಯಾವುದೇ ಐಪಿಎಲ್ ತಂಡಗಳು ಈ ನಿಯಮವನ್ನು ತೆಗೆದುಹಾಕುವಂತೆ ಬಿಸಿಸಿಐಗೆ ಅಧಿಕೃತವಾಗಿ ಮನವಿ ಮಾಡಿಲ್ಲ ಎಂದು ಸೈಕಿಯಾ ಹೇಳಿದ್ದಾರೆ.
- ಮನರಂಜನೆಯ ಅಂಶ: ಈ ನಿಯಮವು ಪಂದ್ಯಗಳಿಗೆ ಹೆಚ್ಚಿನ ವೇಗ ಮತ್ತು ಕುತೂಹಲ ನೀಡಿದೆ. ತಂಡಗಳು 260ಕ್ಕೂ ಹೆಚ್ಚು ರನ್ ಗಳಿಸಲು ಈ ನಿಯಮ ಸಹಕಾರಿಯಾಗಿದೆ, ಇದು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತಿದೆ ಎಂಬುದು ಬಿಸಿಸಿಐನ ಅಭಿಪ್ರಾಯ.
- ಟೀಕೆಗಳು: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಆಲ್ರೌಂಡರ್ಗಳ ಬೆಳವಣಿಗೆಗೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮಾರಕವಾಗಿದೆ ಮತ್ತು ಪಂದ್ಯವನ್ನು ’12 ವರ್ಸಸ್ 12′ ಆಟವನ್ನಾಗಿ ಮಾಡಿದೆ ಎಂಬುದು ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐ ಮುಂದಿನ ನಡೆ:
2026ರ ಸೀಸನ್ ಮುಗಿದ ನಂತರ, ಬಿಸಿಸಿಐ ಪದಾಧಿಕಾರಿಗಳು, ತಂಡದ ಮಾಲೀಕರು ಮತ್ತು ತಜ್ಞರೊಂದಿಗೆ ಸಭೆ ನಡೆಸಿ ಈ ನಿಯಮವನ್ನು ಮುಂದಿನ 2027ರ ಸೀಸನ್ನಲ್ಲಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ.
ಅಂದರೆ ಈ ಬಾರಿಯ ಐಪಿಎಲ್ ಬಳಿಕ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಭವಿಷ್ಯ ನಿರ್ಧಾರವಾಗಲಿದೆ. ಈ ನಿಒಯಮವನ್ನು ತೆಗೆದು ಹಾಕಿದರೆ, ಆಡುವ ಬಳಗದಲ್ಲಿ 11 ಆಟಗಾರರು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಸಿಕ್ಸರ್ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್ ನೀಡಿದ ಪಂಜಾಬ್ ಕಿಂಗ್ಸ್
ಪ್ರಸ್ತುತ ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿ ಒಟ್ಟು 12 ಆಟಗಾರರಿಗೆ ಅವಕಾಶ ಸಿಗುತ್ತಿದೆ. ಅಂದರೆ 11+1 ಆಟಗಾರರನ್ನು ಕಣಕ್ಕಿಳಿಸಲಾಗುತ್ತಿದೆ. ಇದೀಗ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ತಿಳಿಸಿರುವ ಕಾರಣ ಐಪಿಎಲ್ 2027 ರಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆದು ಹಾಕುವ ಸಾಧ್ಯತೆಯಿದೆ.