ಐಪಿಎಲ್ 2026 ಇದೇ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಈ ಆವೃತ್ತಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಪಂದ್ಯದ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಐಪಿಎಲ್ನ ಉದ್ಘಾಟನಾ ಪಂದ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವೀರೇಂದ್ರ ಸೆಹ್ವಾಗ್, ಈ ಪಂದ್ಯ ಕೇವಲ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಹೋರಾಟವಲ್ಲ. ಬದಲಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದು ಪರಿಗಣಿಸಬೇಕು ಎಂದಿದ್ದಾರೆ. ಇದರ ಜೊತೆಗೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೆಚ್ಚಿನ ಅಭಿಮಾನಿ ಬಳಗವಿಲ್ಲ ಎಂದಿರುವ ಸೆಹ್ವಾಗ್, ಇದು ಮಾರ್ಚ್ 28 ರಂದು ಕ್ರೀಡಾಂಗಣದಲ್ಲಿ ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ವಾಸ್ತವವಾಗಿ ಸೆಹ್ವಾಗ್ ಈ ರೀತಿಯ ಹೇಳಿಕೆ ನೀಡುವುದಕ್ಕೆ ಕಾರಣವೂ ಇದೆ. ಅದೆನೆಂದರೆ ಕೆಲವೇ ದಿನಗಳ ಹಿಂದೆ ನಡೆದಿದ್ದ “ದಿ 100 ಲೀಗ್” ಹರಾಜಿನಲ್ಲಿ ಕಾವ್ಯಾ ಮಾರನ್ ಒಡೆತನದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಆಟಗಾರ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ.ಗೆ ಖರೀದಿಸಿತ್ತು. ಹೀಗಾಗಿ ಕಾವ್ಯಾ ಮಾರನ್ ವಿರುದ್ಧ ಭಾರತೀಯರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಗಳಿಸಿದ ಹಣವನ್ನು ಪಾಕಿಸ್ತಾನಿ ಆಟಗಾರರಿಗಾಗಿ ಖರ್ಚು ಮಾಡಿದ್ದಕ್ಕಾಗಿ ಕಾವ್ಯ ಮಾರನ್ ಅವರನ್ನು ಟೀಕಿಸಲಾಗಿತ್ತು.
ಇದೀಗ ವೀರೇಂದ್ರ ಸೆಹ್ವಾಗ್ ಕೂಡ ಅದೇ ವಿಚಾರವನ್ನು ಮುಂದಿಟ್ಟು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಟೀಕಿಸಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಇನ್ನು ಕಾವ್ಯ ಮಾರನ್ ಫ್ರಾಂಚೈಸಿ, ಪಾಕ್ ಆಟಗಾರನನ್ನು ಖರೀದಿಸಿದರ ಬಗ್ಗೆ ಮೌನ ಮುರಿದಿದ್ದ ಬಿಸಿಸಿಐ, ವಿದೇಶಿ ಲೀಗ್ಗಳಲ್ಲಿ ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಖರೀದಿಸುವ ಸ್ವಾತಂತ್ರ್ಯವಿದೆ. ಹೀಗಾಗಿ ಇದು ನಮ್ಮ ನಿಯಂತ್ರಣದಲಿಲ್ಲ ಎಂದಿತ್ತು.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಲೀಗ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಇಂಜುರಿಯಿಂದ ಇನ್ನು ಗುಣಮುಖರಾಗಿಲ್ಲ. ಹೀಗಾಗಿ ಫ್ರಾಂಚೈಸಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ಗೆ ನಾಯಕತ್ವದ ಜವಾಬ್ದಾರಿವಹಿಸಿದೆ. ಇದೇ ಮೊದಲ ಬಾರಿಗೆ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸುತ್ತಿರುವ ಕಿಶನ್, ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
