
2026 ರ ಐಪಿಎಲ್ (IPL 2026) ಆರಂಭಕ್ಕೆ ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಆದರೆ ಇದುವರೆಗೂ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕೆಲವು ದಿನಗಳ ಹಿಂದೆ ಬಿಸಿಸಿಐ (BCCI), ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗಿನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಕೇವಲ 20 ಪಂದ್ಯಗಳು ಮಾತ್ರ ಸೇರಿವೆ. ಇದೀಗ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿ ಯಾವಾಗ ಪ್ರಕಟವಾಗಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ವಾಸ್ತವವಾಗಿ ಐಪಿಎಲ್ ಪಂದ್ಯಗಳು ನಡೆಯುವ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ಕಾರಣದಿಂದ ಭದ್ರತಾ ದೃಷ್ಟಿಯಿಂದ ಬಿಸಿಸಿಐ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿರಲಿಲ್ಲ. ಇದೀಗ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗುವ ಕಾಲವು ಸನಿಹಿತವಾಗಿದೆ.
26 ರೊಳಗೆ ವೇಳಾಪಟ್ಟಿ ಪ್ರಕಟ
ವರದಿಗಳ ಪ್ರಕಾರ, ಮಾರ್ಚ್ 26 ರೊಳಗೆ ಬಿಸಿಸಿಐ, ಉಳಿದ ಐಪಿಎಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಹೀಗಾಗಿ ಅಂತಿಮ ಪಟ್ಟಿಯನ್ನು ಸಿದ್ಧಗೊಳಿಸಲು 3-4 ದಿನಗಳನ್ನು ತೆಗೆದುಕೊಳ್ಳಬಹುದು ಎಂದು ಮಂಡಳಿಯು ಎಲ್ಲಾ ಫ್ರಾಂಚೈಸಿಗಳಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ ವಿಧಾನಸಭಾ ಚುನಾವಣೆಗಳು ನಡೆಯುವ ಕಾರಣದಿಂದ ಬಿಸಿಸಿಐ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಇದೀಗ ವಿಧಾನಸಭಾ ಚುನಾವಣೆ ನಡೆಯುವ ದಿನಾಂಕಗಳನ್ನು ಘೋಷಿಸಲಾಗಿದೆ. ಅದರಂತೆ ವಿಧಾನಸಭಾ ಚುನಾವಣೆಗಳು ನಡೆಯುವ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಐಪಿಎಲ್ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಆದ್ದರಿಂದ, ಚೆನ್ನೈ (ಏಪ್ರಿಲ್ 23), ಕೋಲ್ಕತ್ತಾ (ಏಪ್ರಿಲ್ 23 ಮತ್ತು 29) ಮತ್ತು ಗುವಾಹಟಿಯ (ಏಪ್ರಿಲ್ 9) ಮತದಾನದ ದಿನಗಳಲ್ಲಿ ಯಾವುದೇ ಪಂದ್ಯಗಳು ನಡೆಯುವುದಿಲ್ಲ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾರ್ಚ್ 29 ರೊಳಗೆ ಮತದಾನ ಪೂರ್ಣಗೊಳ್ಳುತ್ತದೆ ಮತ್ತು ಮೇ 4 ರಂದು ಮತ ಎಣಿಕೆ ನಡೆಯಲಿದೆ. ಆದ್ದರಿಂದ, ಈ ದಿನಾಂಕಗಳಲ್ಲಿ ಈ ರಾಜ್ಯಗಳಲ್ಲಿ ಯಾವುದೇ ಐಪಿಎಲ್ ಪಂದ್ಯಗಳನ್ನು ಆಡಲಾಗುವುದಿಲ್ಲ.
IPL: ಕೆಟ್ಟ ಮೇಲೆ ಬುದ್ದಿ ಕಲಿತ ಬಾಂಗ್ಲಾದೇಶ; ಐಪಿಎಲ್ ಬ್ಯಾನ್ ತೆರವಿಗೆ ಚಿಂತನೆ
ಎಷ್ಟು ಪಂದ್ಯಗಳು ನಡೆಯಲಿವೆ?
ವಾಸ್ತವವಾಗಿ ಈ ಬಾರಿಯ ಐಪಿಎಲ್ನಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಅಂದರೆ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಪಂದ್ಯಗಳ ಸಂಖ್ಯೆ 84ಕ್ಕೆ ಏರಲಿದೆ ಎಂದು ವರದಿಯಾಗಿತ್ತು. ಆದರೆ ಈ ಬಾರಿಯೂ ಕಳೆದ ಬಾರಿ ನಡೆದಷ್ಟೇ ಪಂದ್ಯಗಳು ಅಂದರೆ ಫೈನಲ್ ಪಂದ್ಯವೂ ಸೇರಿದ್ದಂತೆ 74 ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿದೆ. ಇದೀಗ ಪ್ರಕಟವಾಗಿರುವ 20 ಪಂದ್ಯಗಳ ವೇಳಾಪಟ್ಟಿಯ ಜೊತೆಗೆ ಮುಂಬರುವ ದಿನಗಳಲ್ಲಿ ಉಳಿದ 54 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ