ಆರ್ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಬಳಸಲಾಗುತ್ತಿರುವ ರೋಬೋ ಶ್ವಾನ್ ಚಂಪಕ್ ಮೇಲೆ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಚಂಪಕ್ನಿಂದ ನಮ್ಮ ಖಾಸಗಿತನಕ್ಕೆ ಭಂಗ ತಂದಿದೆ ಎಂಬುದು ಕೊಹ್ಲಿ ಆರೋಪವಾಗಿದೆ. ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾಯಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡಿದ ವಿರಾಟ್, ಅಭ್ಯಾಸದ ಸಮಯದಲ್ಲಿ ನಿರಂತರವಾಗಿ ಕ್ಯಾಮೆರಾಗಳು ತಮ್ಮನ್ನು ಫಾಲೋ ಮಾಡುವುದು ಆಟಗಾರರಿಗೆ ತುಂಬಾ ಕಸಿವಿಸಿಯನ್ನುಂಟು ಮಾಡುತ್ತಿದೆ ಎಂದಿರುವ ಕೊಹ್ಲಿ, ಬಿಸಿಸಿಐನ ರೋಬೋ-ನಾಯಿ ಚಂಪಕ್ ತನ್ನ ವೈಯಕ್ತಿಕ ಕ್ಷಣಗಳನ್ನು ರೆಕಾರ್ಡ್ ಮಾಡುತ್ತಿದ್ದ ಘಟನೆಯನ್ನು ಸಹ ನೆನಪಿಸಿಕೊಂಡಿದ್ದಾರೆ.
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದ ನಡುವೆ ನಡೆದ ಘಟನೆಯನ್ನು ವಿವರಿಸಿರುವ ಕೊಹ್ಲಿ, ‘ನಾನು ನನ್ನ ಸ್ನೇಹಿತ ಕೇನ್ ವಿಲಿಯಮ್ಸನ್ ಜೊತೆ ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ, ರೋಬೋ ಶ್ವಾನ ಚಂಪಕ್ ನಮ್ಮ ಹತ್ತಿರ ಬಂದು ನನ್ನತ್ತ ಕೈ ಬೀಸಲಾರಂಭಿಸಿತು. ಇದು ನಮ್ಮ ಖಾಸಗಿತನಕ್ಕೆ ಧಕ್ಕೆ ತಂದಿತು. ಕೂಡಲೇ ನಾನು ರೋಬೋ ಶ್ವಾನವನ್ನು ನಿಯಂತ್ರಿಸುವ ವ್ಯಕ್ತಿಗೆ ದಯವಿಟ್ಟು ರೋಬೋ ಶ್ವಾನವನ್ನು ನಮ್ಮ ಬಳಿಯಿಂದ ದೂರಕ್ಕೆ ಕರೆದುಕೊಂಡು ಹೋಗಿ, ನಮ್ಮಿಬ್ಬರಿಗೆ ಸಮಾಧಾನದಿಂದ ಮಾತನಾಡಲು ಬಿಡಿ’ಎಂದು ಹೇಳಿದೆ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ಕೊಹ್ಲಿ , ‘ನೀವು ಅಭ್ಯಾಸಕ್ಕೆ ಹೋದಾಗ, ಆರು ಕ್ಯಾಮೆರಾಗಳು ನಿಮ್ಮನ್ನು ಹಿಂಬಾಲಿಸುತ್ತವೆ. ಇದು ಸರಿಯಲ್ಲ. ಆಟಗಾರರು ತಮ್ಮ ಆಟದ ಮೇಲೆ ಶಾಂತಿಯಿಂದ ಕೆಲಸ ಮಾಡುವ ಸ್ವಾತಂತ್ರ್ಯ ಹೊಂದಿರಬೇಕು. ಎಲ್ಲವೂ ಚಿತ್ರೀಕರಣ ಮತ್ತು ಚರ್ಚೆಗೆ ಅವಕಾಶವಾಗಿದ್ದರೆ, ಆಟಗಾರರು ಸ್ವಾಭಾವಿಕವಾಗಿ ಉಳಿಯಲು ಸಾಧ್ಯವಾಗುವುದಿಲ್ಲ. ನನ್ನ ಪಂದ್ಯದ ಪ್ರದರ್ಶನದ ಮೇಲೆ ನಮ್ಮನ್ನು ನಿರ್ಣಯಿಸಿ. ಅದನ್ನು ಬಿಟ್ಟು ನನ್ನ ಅಭ್ಯಾಸದ ಮೇಲೆ ಅಲ್ಲ’ ಎಂದಿದ್ದಾರೆ.
