2026 ರ ಐಪಿಎಲ್ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಇದು ಈ ಲೀಗ್ನ 19ನೇ ಆವೃತ್ತಿಯಾಗಿದ್ದು, ಕಳೆದ 18 ಆವೃತ್ತಿಗಳಲ್ಲಿ ಸಾವಿರಾರು ದಾಖಲೆಗಳು ಸೃಷ್ಟಿಯಾಗಿವೆ. ಇದು ಈ ಲೀಗ್ನ ಯಶಸ್ಸಿಗೂ ಕಾರಣವಾಗಿದೆ. ಅಂತಹ ದಾಖಲೆಗಳಲ್ಲಿ ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ನಡೆದಿರುವ 18 ಫೈನಲ್ಗಳಲ್ಲಿ ಎಂದಿಗೂ ಸೋತಿಲ್ಲದ 16 ಆಟಗಾರರ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಆರು ವಿದೇಶಿ ಆಟಗಾರರಿದ್ದರೆ, 10 ಭಾರತೀಯ ಆಟಗಾರರು ಸೇರಿದ್ದಾರೆ.
ರೋಹಿತ್ ಶರ್ಮಾ ಒಬ್ಬ ಆಟಗಾರನಾಗಿ ಅತಿ ಹೆಚ್ಚು ಐಪಿಎಲ್ ಫೈನಲ್ಗಳನ್ನು ಗೆದ್ದಿದ್ದಾರೆ. ಗಮನಾರ್ಹ ವಿಷಯವೆಂದರೆ ಅವರು ಆರು ಬಾರಿ ಫೈನಲ್ ಪಂದ್ಯಗಳನ್ನು ಆಡಿದ್ದು, ಪ್ರತಿ ಬಾರಿಯೂ ಗೆದ್ದಿದ್ದಾರೆ. ಇದರರ್ಥ ರೋಹಿತ್ ಶರ್ಮಾ ಐಪಿಎಲ್ ಫೈನಲ್ ಇತಿಹಾಸದಲ್ಲಿ ಅತ್ಯಂತ ಅಜೇಯ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಮುಂಬೈ ಇಂಡಿಯನ್ಸ್ ಪರ ಐದು ಬಾರಿ ಮತ್ತು ಡೆಕ್ಕನ್ ಚಾರ್ಜರ್ಸ್ ಪರ ಒಮ್ಮೆ ಐಪಿಎಲ್ ಫೈನಲ್ನಲ್ಲಿ ಆಡಿದ್ದಾರೆ.
ರೋಹಿತ್ ಶರ್ಮಾ ನಂತರ ಎರಡನೇ ಸ್ಥಾನದಲ್ಲಿರುವ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೂಡ ಐಪಿಎಲ್ ಫೈನಲ್ಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆಯನ್ನು ಹೊಂದಿದ್ದಾರೆ. ಅವರು ನಾಲ್ಕು ಬಾರಿ ಐಪಿಎಲ್ ಫೈನಲ್ನಲ್ಲಿ ಆಡಿದ್ದು ಪ್ರತಿ ಬಾರಿಯೂ ಗೆದ್ದಿದ್ದಾರೆ.
ಕೃನಾಲ್ ನಂತರ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಇಬ್ಬರೂ ಆಟಗಾರರು ಐಪಿಎಲ್ ಫೈನಲ್ನಲ್ಲಿ ಮೂರು ಬಾರಿ ಆಡಿದ್ದು, ಮೂರನ್ನೂ ಗೆದ್ದಿದ್ದಾರೆ.
ಉಳಿದಂತೆ ಕ್ವಿಂಟನ್ ಡಿ ಕಾಕ್, ರುತುರಾಜ್ ಗಾಯಕ್ವಾಡ್, ಗೌತಮ್ ಗಂಭೀರ್, ಜೋಶ್ ಹೇಜಲ್ವುಡ್, ಇಶಾನ್ ಕಿಶನ್, ಮೆಕ್ಕ್ಲೆನಾಘನ್, ಪ್ರಗ್ಯಾನ್ ಓಜಾ, ಕರಣ್ ಶರ್ಮಾ, ಲೆಂಡ್ಲ್ ಸಿಮನ್ಸ್, ಯಶ್ ದಯಾಳ್, ಮೊಯಿನ್ ಅಲಿ ಮತ್ತು ಡೌಗ್ ಬೋಲಿಂಗರ್ ತಲಾ ಎರಡು ಬಾರಿ ಐಪಿಎಲ್ ಫೈನಲ್ನಲ್ಲಿ ಆಡಿದ್ದು, ಆ ಪಂದ್ಯಗಳನ್ನು ಗೆದ್ದಿದ್ದಾರೆ.
