IPL 2026: ಕೇವಲ 55 ಎಸೆತಗಳಲ್ಲಿ ಸ್ಫೋಟಕ ಶತಕ ಚಚ್ಚಿದ ಅಂಗ್‌ಕ್ರಿಶ್ ರಘುವಂಶಿ

IPL 2026: ಕೇವಲ 55 ಎಸೆತಗಳಲ್ಲಿ ಸ್ಫೋಟಕ ಶತಕ ಚಚ್ಚಿದ ಅಂಗ್‌ಕ್ರಿಶ್ ರಘುವಂಶಿ

ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ 2026 ರ ಐಪಿಎಲ್​ನಲ್ಲಿ ಮಾರ್ಚ್​ 29 ರಿಂದ ತನ್ನ ಅಭಿಯಾನವನ್ನು ಶುರುಮಾಡಿದೆ. ಕೆಕೆಆರ್ ತಂಡ ತನ್ನ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹೀಗಾಗಿ ಈ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಕಟ್ಟುವ ಸಲುವಾಗಿ ಕೆಕೆಆರ್ ಫ್ರಾಂಚೈಸಿ ತಮ್ಮ ತಂಡದೊಳಗೆ ಎರಡೆರಡು ತಂಡಗಳನ್ನು ನಿರ್ಮಿಸಿ ಅಭ್ಯಾಸ ಪಂದ್ಯವನ್ನು ಆಡಿತು. ಅದರಲ್ಲಿ ತಂಡದಲ್ಲಿರುವ 21 ವರ್ಷದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಕೇವಲ 55 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮಾರ್ಚ್ 20 ರ ಶುಕ್ರವಾರದಂದು ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಿತು. ಇಡೀ ತಂಡವನ್ನು ಗೋಲ್ಡ್ ನೈಟ್ಸ್ ಮತ್ತು ಪರ್ಪಲ್ ನೈಟ್ಸ್ ಎಂಬ ಎರಡು ಪ್ರತ್ಯೇಕ ತಂಡಗಳಾಗಿ ವಿಂಗಡಿಸಲಾಗಿತ್ತು. ಈ ಪಂದ್ಯದಲ್ಲಿ ಗೋಲ್ಡ್ ನೈಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 199 ರನ್ ಕಲೆಹಾಕಿತು. ತಂಡದ ಪರ ರಿಂಕು ಸಿಂಗ್ 40 ರನ್ ಗಳಿಸಿದರೆ, ಹೊಸ ಆರಂಭಿಕ ಆಟಗಾರ ಟಿಮ್ ಸೀಫರ್ಟ್ 30 ರನ್ ಗಳಿಸಿದರು. ಯುವ ಬ್ಯಾಟ್ಸ್‌ಮನ್ ಸಾರ್ಥಕ್ ರಂಜನ್ ಕೂಡ 37 ರನ್​ಗಳ ಕಾಣಿಕೆ ನೀಡಿದರು. ಇತ್ತ ಪರ್ಪಲ್ ನೈಟ್ಸ್ ತಂಡದ ಪರ ವೇಗಿ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದರು.

ರಘುವಂಶಿ ಸ್ಫೋಟಕ ಶತಕ

ಈ ಗುರಿ ಬೆನ್ನಟ್ಟಿದ ಪರ್ಪಲ್ ನೈಟ್ಸ್‌ ತಂಡಕ್ಕೆ ಫಿನ್ ಅಲೆನ್ ಸ್ಫೋಟಕ ಆರಂಭ ನೀಡಿದರು. ಆದರೆ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಬೇಗನೆ ಔಟಾದರು. ಆ ಬಳಿಕ ಕಣಕ್ಕಿಳಿದ 21 ವರ್ಷದ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಅಂಡರ್-19 ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಭಾಗವಾಗಿದ್ದ ರಘುವಂಶಿ ನಿಧಾನವಾಗಿ ಪ್ರಾರಂಭಿಸಿದರಾದರೂ ಆ ನಂತರ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿ, 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಕೇವಲ 55 ಎಸೆತಗಳಲ್ಲಿ ಶತಕದ ಗಡಿ ದಾಟಿದರು.

ತಂಡವನ್ನು ಗೆಲ್ಲಿಸಿದ ರಘುವಂಶಿ

ಇನ್ನಿಂಗ್ಸ್‌ನ 20 ನೇ ಓವರ್‌ನ ಎರಡನೇ ಎಸೆತದಲ್ಲಿ ಅವರು ಬೌಂಡರಿ ಬಾರಿಸಿ, ಶತಕ ಪೂರೈಸುವುದರೊಂದಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಮತ್ತು ಐದು ಸಿಕ್ಸರ್‌ಗಳನ್ನು ಬಾರಿಸಿದ ರಘುವಂಶಿ, 187 ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ 103 ರನ್ ಕಲೆಹಾಕಿದರು. ಅವರ ಈ ಇನ್ನಿಂಗ್ಸ್ ಪರ್ಪಲ್ ನೈಟ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಗೆಲ್ಲಲು ಸಹಾಯ ಮಾಡಿತು. ರಘುವಂಶಿ ಅವರ ಇನ್ನಿಂಗ್ಸ್ ಕೋಲ್ಕತ್ತಾದ ಬ್ಯಾಟಿಂಗ್ ವಿಭಾಗಕ್ಕೆ ಆನೆಬಲ ತಂದಿದೆ.

ಏಕೆಂದರೆ ಶ್ರೇಯಸ್ ಅಯ್ಯರ್ ನಿರ್ಗಮನದ ಬಳಿಕ ತಂಡದ ಬ್ಯಾಟಿಂಗ್‌ ವಿಭಾಗ ಬಲಹೀನವಾಗಿ ಕಾಣುತ್ತಿತ್ತು. ಆದರೆ ಈ ಬಾರಿ ಕೆಲವರ ಆಗಮನದ ಬಳಿಕ ಅದು ಬಲಿಷ್ಠವಾಗಿ ಕಾಣುತ್ತಿದೆ. ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿರುವ ರಘುವಂಶಿ, ಲೀಗ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *