2026 ರ ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆ ಪ್ರತಿ ತಂಡವನ್ನು ಕಾಡುತ್ತಿದೆ. ಈಗಾಗಲೇ ಕೆಲವು ತಂಡಗಳ ಸ್ಟಾರ್ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಕೆಲವು ತಂಡಗಳಲ್ಲಿ ಗಾಯದ ಮೇಲೆ ಬರೆ ಎಂಬಂತೆ ಎರಡಕ್ಕಿಂತ ಹೆಚ್ಚು ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಕೆಲವರು ಲೀಗ್ನಿಂದ ಹೊರಬಿದಿದ್ದರೆ, ಇನ್ನು ಕೆಲವರು ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಅಂತಹ ತಂಡಗಳ ಪೈಕಿ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಕೂಡ ಒಂದಾಗಿದೆ. ತಂಡದ ಮತ್ತೊಬ್ಬ ವೇಗದ ಬೌಲರ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಆಕಾಶ್ ದೀಪ್ ಗಾಯದ ಕಾರಣದಿಂದಾಗಿ ಐಪಿಎಲ್ 2026 ರಿಂದ ಹೊರಗುಳಿದಿದ್ದಾರೆ.
ವರದಿಯ ಪ್ರಕಾರ, ಆಕಾಶ್ ದೀಪ್ ಬೆನ್ನುನೋವಿನಿಂದ ಬಳಲುತ್ತಿದ್ದು, ಅದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪ್ರಸ್ತುತ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರಿಹ್ಯಾಬ್ಗೆ ಒಳಗಾಗುತ್ತಿದ್ದಾರೆ. ಈ ಕಾರಣದಿಂದಾಗಿ, ಅವರು ಈ ಆವೃತ್ತಿಗೆ ಲಭ್ಯವಿರುವುದಿಲ್ಲ.
ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಇದು ದೊಡ್ಡ ಹೊಡೆತವಾಗಿದೆ. ಏಕೆಂದರೆ ಹರಾಜಿನ ನಂತರ ಈ ಆವೃತ್ತಿಯಲ್ಲಿ ಕೆಕೆಆರ್ ಪರ ಆಡಲು ಸಾಧ್ಯವಾಗದ ಮೂರನೇ ವೇಗಿ ಇವರು. ಮೊದಲನೆಯದಾಗಿ, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡದಿಂದ ಬಿಡುಗಡೆ ಮಾಡಿತ್ತು. ಇದರ ನಂತರ, ಭಾರತದ ಯುವ ಬೌಲರ್ ಹರ್ಷಿತ್ ರಾಣಾ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಈಗ ಆಕಾಶ್ ದೀಪ್ ಕೂಡ ಲೀಗ್ನಿಂದ ಹೊರಗುಳಿದಿದ್ದಾರೆ.
ಇದು ಸಾಲದೆಂಬಂತೆ ಹರಾಜಿನಲ್ಲಿ 18 ಕೋಟಿಗೆ ಖರೀದಿಸಲಾದ ಶ್ರೀಲಂಕಾದ ವೇಗದ ಬೌಲರ್ ಮಥೀಷ ಪತಿರಾನ ಕೂಡ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲ. ಟಿ20 ವಿಶ್ವಕಪ್ ಸಮಯದಲ್ಲಿ ಗಾಯಗೊಂಡಿದ್ದ ಪತಿರಾನ ಇದುವರೆಗೂ ಫಿಟ್ ಆಗಿಲ್ಲ. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವವರೆಗೆ ಅವರಿಗೆ ಐಪಿಎಲ್ನಲ್ಲಿ ಆಡಲು ಅವಕಾಶ ನೀಡಲಾಗುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಸ್ಪಷ್ಟಪಡಿಸಿದೆ. ಆದ್ದರಿಂದ, ಏಪ್ರಿಲ್ ಮಧ್ಯದ ವೇಳೆಗೆ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿವೆ




