ಟೀಂ ಇಂಡಿಯಾವನ್ನು ಟಿ20 ವಿಶ್ವಕಪ್ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇದೀಗ ಐಪಿಎಲ್ನಲ್ಲಿ ತಮ್ಮ ಕೈಚಳಕ ತೋರಲು ಸಿದ್ಧರಾಗಿದ್ದಾರೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಅಧಿಕ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿರುವ ಬುಮ್ರಾ, ಈ ಲೀಗ್ನಲ್ಲಿ ಬೇಡದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ವಾಸ್ತವವಾಗಿ ಐಪಿಎಲ್ನಲ್ಲಿ ಅತಿ ಹೆಚ್ಚು ನೋ ಬಾಲ್ಗಳನ್ನು ಬೌಲ್ ಮಾಡಿದ ಬೌಲರ್ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ಮಾತ್ರವಲ್ಲದೆ ಈ ವಿಚಾರದಲ್ಲಿ ಬುಮ್ರಾ ಅವರ ಹತ್ತಿರದಲ್ಲಿ ಯಾವುದೇ ಬೌಲರ್ಗಳಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಐಪಿಎಲ್ನಲ್ಲಿ ಬಹುಬೇಡಿಕೆಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಬುಮ್ರಾ ಈ ರೀತಿಯ ಬೇಡದ ದಾಖಲೆ ಬರೆದಿರುವುದು ನಂಬಲಾಸಾಧ್ಯವಾಗಿದೆ.
ಇದುವರೆಗೆ ಐಪಿಎಲ್ನಲ್ಲಿ 145 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಜಸ್ಪ್ರೀತ್ ಬುಮ್ರಾ 32 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ. ಬುಮ್ರಾ ನಂತರದ ಸ್ಥಾನದಲ್ಲಿರುವ ಅನುಭವಿ ವೇಗಿ ಉಮೇಶ್ ಯಾದವ್ 24 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಮತ್ತೊಬ್ಬ ಅನುಭವಿ ವೇಗಿ ಇಶಾಂತ್ ಶರ್ಮಾ 23 ನೋ-ಬಾಲ್ಗಳನ್ನು ಬೌಲ್ ಮಾಡಿದ್ದಾರೆ.
ಬುಮ್ರಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಯಶಸ್ವಿ ಬೌಲರ್ಗಳಲ್ಲಿ ಒಬ್ಬರು. ಆದ್ದರಿಂದ, ಅವರ ಹೆಸರಿನಲ್ಲಿರುವ ಈ ಅನಗತ್ಯ ದಾಖಲೆ ಆಶ್ಚರ್ಯಕರವಾಗಿದೆ. ಇದರ ಹೊರತಾಗಿಯೂ, ಬುಮ್ರಾ ಮುಂಬೈ ತಂಡವು ನಾಲ್ಕು ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 145 ಇನ್ನಿಂಗ್ಸ್ಗಳನ್ನಾಡಿರುವ ಬುಮ್ರಾ 183 ವಿಕೆಟ್ಗಳನ್ನು ಕಬಳಿಸಿದ್ದು ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಪ್ರಸ್ತುತ ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು ಅದ್ಭುತ ಫಾರ್ಮ್ನಲ್ಲಿರುವ ಬುಮ್ರಾ, ಐಪಿಎಲ್ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
