IPL 2026: ಐಪಿಎಲ್ 2026ರ ಸೀಸನ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಮುಂದಿನ ಪಂದ್ಯಗಳಿಗೂ ಮುನ್ನ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಲು ಒಂದು ಪುಟ್ಟ ವಿರಾಮ ಪಡೆದುಕೊಂಢಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ನಂತರ ಸಿಕ್ಕ ಒಂದು ವಾರದ ಬಿಡುವನ್ನು ಬಳಸಿಕೊಂಡಿರುವ ತಂಡ, ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದೆ.
ವಿಶ್ರಾಂತಿ ಮತ್ತು ರಿಫ್ರೆಶ್:
ಟೂರ್ನಿಯ ಸತತ ಪ್ರಯಾಣ ಮತ್ತು ಒತ್ತಡದಿಂದ ಹೊರಬರಲು ಮ್ಯಾನೇಜ್‌ಮೆಂಟ್ ಈ ಪ್ರವಾಸವನ್ನು ಆಯೋಜಿಸಿದೆ. ನ್ಯೂಝಿಲೆಂಡ್ ವೇಗಿ ಜೇಕಬ್ ಡಫಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಲ್ಡೀವ್ಸ್ ಫೋಟೋ ಹಂಚಿಕೊಳ್ಳುವ ಮೂಲಕ ಈ ಪ್ರವಾಸವನ್ನು ಖಚಿತಪಡಿಸಿದ್ದಾರೆ. ತಂಡದ ಬಹುತೇಕ ಆಟಗಾರರು ಈ ಪ್ರವಾಸದಲ್ಲಿದ್ದರೂ, ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಓಪನರ್ ಫಿಲ್ ಸಾಲ್ಟ್ ಈ ಪ್ರವಾಸದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.
RCB’s overseas players have been sent to the Maldives for a break during the IPL schedule gap 🌊🌴 pic.twitter.com/vwTzJSzROt
— CricketGully (@thecricketgully) May 2, 2026
ಪ್ಲೇ-ಆಫ್ ಹಾದಿ ಸುಗಮ:
ಪ್ರಸ್ತುತ ರಾಯಲ್ ಚಾಲೆಂಕರ್ಸ್ ಬೆಂಗಳೂರು ತಂಡವು 9 ಪಂದ್ಯಗಳಲ್ಲಿ 6 ಜಯದೊಂದಿಗೆ 12 ಅಂಕಗಳನ್ನು ಗಳಿಸಿ ಭದ್ರವಾದ ಸ್ಥಾನದಲ್ಲಿದೆ. ಪ್ಲೇ-ಆಫ್ ಹಂತಕ್ಕೇರಲು ತಂಡಕ್ಕೆ ಇನ್ನು ಕೇವಲ ಎರಡು ಗೆಲುವುಗಳ ಅವಶ್ಯಕತೆಯಿದೆ. ಈ ವಿಶ್ರಾಂತಿಯು ಆಟಗಾರರು ಹೊಸ ಉತ್ಸಾಹದೊಂದಿಗೆ ಮೈದಾನಕ್ಕಿಳಿಯಲು ಸಹಕಾರಿಯಾಗಲಿದೆ.
ಮುಂದಿನ ಸವಾಲುಗಳು:
ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ, ಮೇ 7ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಆನಂತರ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿವೆ. ಈ ಪಂದ್ಯಗಳ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ಗೇರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಗೆ ಭರ್ಜರಿ ಗಿಫ್ಟ್ ನೀಡಿದ ಪಂಜಾಬ್ ಕಿಂಗ್ಸ್
ಆರ್‌ಸಿಬಿ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ:
- ಲಕ್ನೋ ಸೂಪರ್ ಜೈಂಟ್ಸ್ (LSG): ಮೇ 7, ರಾತ್ರಿ 7:30ಕ್ಕೆ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಲಕ್ನೋದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ದೊಡ್ಡ ಸವಾಲು ಎದುರಾಗಲಿದೆ.
- ಮುಂಬೈ ಇಂಡಿಯನ್ಸ್ (MI): ಮೇ 10ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ.
- ಕೋಲ್ಕತ್ತಾ ನೈಟ್ ರೈಡರ್ಸ್ (KKR): ಮೇ 13ರಂದು ಮತ್ತೆ ರಾಯ್‌ಪುರದಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ಸೆಣಸಲಿದೆ.
- ಪಂಜಾಬ್ ಕಿಂಗ್ಸ್ (PBKS): ಮೇ 17ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಲಿದೆ.
- ಸನ್‌ರೈಸರ್ಸ್ ಹೈದರಾಬಾದ್ (SRH): ಮೇ 22ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಸ್ಆರ್ಹೆಚ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿದೆ.
Published On – 12:50 pm, Sun, 3 May 26
