IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜಯ ಸಾಧಿಸಿದೆ. ಮುಲ್ಲನ್ಪುರ್ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಆರ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 37 ರನ್ ಕಲೆಹಾಕಿದ ಬಳಿಕ ಪ್ರಿಯಾಂಶ್ ಆರ್ಯ (29) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಕೂಪರ್ ಕೊನೊಲಿ 30 ರನ್ಗಳ ಕೊಡುಗೆ ನೀಡಿದರು.
ಮತ್ತೊಂದೆಡೆ ಪ್ರಭ್ಸಿಮ್ರಾನ್ ಸಿಂಗ್ 59 ರನ್ ಬಾರಿಸಿದರು. ಇನ್ನು ನಾಯಕ ಶ್ರೇಯಸ್ ಅಯ್ಯರ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಮಾರ್ಕಸ್ ಸ್ಟೊಯಿನಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ಸ್ಟೊಯಿನಿಸ್ ಕೇವಲ 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 62 ರನ್ ಬಾರಿಸಿದರು. ಈ ಸಿಡಿಲಬ್ಬರದ ಅರ್ಧಶತಕದ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 222 ರನ್ ಕಲೆಹಾಕಿತು.
223 ರನ್ಗಳ ಗುರಿ:
223 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಅಬ್ಬರ ಶುರು ಮಾಡಿದ ವೈಭವ್ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 43 ರನ್ ಚಚ್ಚಿದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ಹೊರ ನಡೆದರು.
ವೈಭವ್ ಔಟಾಗುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಶುರು ಮಾಡಿದ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 51 ರನ್ ಬಾರಿಸಿದರು. ಇದರ ನಡುವೆ ಧ್ರುವ್ ಜುರೆಲ್ 16 ರನ್ಗಳ ಕೊಡುಗೆ ನೀಡಿದ್ದರು.
ಆ ಬಳಿಕ ಬಂದ ರಿಯಾನ್ ಪರಾಗ್ 29 ರನ್ಗಳನ್ನು ಬಾರಿಸಿ 14ನೇ ಓವರ್ನ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿದರು. ಅದರಂತೆ ಅಂತಿಮ 6 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 72 ರನ್ಗಳ ಅವಶ್ಯಕತೆಯಿತ್ತು.
ಈ ಹಂತದಲ್ಲಿ ಜೊತೆಗೂಡಿದ ಡೊನೊವನ್ ಫೆರೇರಾ ಹಾಗೂ ಶುಭಂ ದುಬೆ 18 ಎಸೆತಗಳಲ್ಲಿ 37 ರನ್ ಬಾರಿಸಿದರು. ಪರಿಣಾಮ ಕೊನೆಯ 3 ಓವರ್ಗಳಲ್ಲಿ 35 ರನ್ಗಳು ಬೇಕಿದ್ದವು. ಈ ವೇಳೆ 18ನೇ ಓವರ್ ಎಸೆದ ಅರ್ಷದೀಪ್ ಸಿಂಗ್ ಬರೋಬ್ಬರಿ 15 ರನ್ಗಳು ನೀಡಿದರು. ಅದರಂತೆ ಅಂತಿಮ 12 ಎಸೆತಗಳಲ್ಲಿ 18 ರನ್ಗಳು ಬೇಕಿದ್ದವು.
ಲಾಕಿ ಫರ್ಗುಸನ್ ಎಸೆದ 19ನೇ ಓವರ್ನಲ್ಲಿ ಆರ್ಆರ್ ಬ್ಯಾಟರ್ಗಳಾದ ಫೆರೇರಾ ಹಾಗೂ ಶುಭಂ ದುಬೆ 16 ರನ್ ಕಲೆಹಾಕಿದರು. ಅಲ್ಲದೆ ಅಂತಿಮ ಓವರ್ನಲ್ಲಿ 2 ರನ್ ಬೇಕಿತ್ತು. ಮಾರ್ಕೊ ಯಾನ್ಸೆನ್ ಎಸೆದ 20ನೇ ಓವರ್ನ 2ನೇ ಎಸೆತದಲ್ಲಿ ಡೊನೊವನ್ ಫೆರೇರಾ ಸಿಕ್ಸ್ ಸಿಡಿಸುವ ಮೂಲಕ 19.2 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 228 ರನ್ ಕಲೆಹಾಕಿತು. ಈ ಮೂಲಕ ಆರ್ಆರ್ ಪಡೆ 6 ವಿಕೆಟ್ಗಳ ಜಯ ಸಾಧಿಸಿದೆ.
ಇದರೊಂದಿಗೆ ಈ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ರಾಜಸ್ಥಾನ್ ರಾಯಲ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಮೊದಲಾರ್ಧದ 7 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಒಂದೇ ಒಂದು ಪಂದ್ಯ ಸೋತಿರಲಿಲ್ಲ. ಇದೀಗ ದ್ವಿತೀಯಾರ್ಧದ ಮೊದಲ ಮ್ಯಾಚ್ನಲ್ಲೇ ಪಂಜಾಬ್ ಪಡೆ ಸೋತಿದೆ. ಈ ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶಾನಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪೂಂಜಾ.
ಇದನ್ನೂ ಓದಿ: ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್!
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.
Published On – 10:57 pm, Tue, 28 April 26
