2026 ರ ಐಪಿಎಲ್‌ನಲ್ಲಿ (IPL 2026) ಸತತ 6 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದ ಪಂಜಾಬ್ ಕಿಂಗ್ಸ್ (Punjab Kings) ತಂಡ ಅದ್ಯಾಕೋ 6 ರ ಪಂದ್ಯಗಳ ನಂತರ ಲಯ ಕಳೆದುಕೊಂಡಿದೆ. ಇದರ ಪರಿಣಾಮವಾಗಿ ಆ ನಂತರ ನಡೆದ ಸತತ ಐದು ಪಂದ್ಯಗಳನ್ನು ಸೋತಿದೆ. ಆರಂಭದಲ್ಲಿ ಸತತ ಗೆಲುವುಗಳಿಂದ ಸುಲಭವಾಗಿ ಪ್ಲೇಆಫ್‌ಗೇರುವ ಭರವಸೆ ಮೂಡಿಸಿದ್ದ ಪಂಜಾಬ್ ಇದೀಗ ಸತತ ಸೋಲುಗಳಿಂದಾಗಿ ಪ್ಲೇಆಫ್ ರೇಸ್ನಿಂದ ಹೊರಗುಳಿಯುವ ಆತಂಕದಲ್ಲಿದೆ. ಅದರಲ್ಲೂ ಪಂಜಾಬ್ ತನ್ನ ತವರು ನೆಲದಲ್ಲೇ ಸೋಲುತ್ತಿರುವುದು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಇದೀಗ ಪಂಜಾಬ್ ಸೋಲಿಗೆ ಕಾರಣ ವಿವರಿಸಿರುವ ಪಂಜಾಬ್ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್(R Ashwin), ಪಂಜಾಬ್ ಕಿಂಗ್ಸ್ ತಂಡದ ಸತತ ಐದು ಸೋಲುಗಳಿಗೆ ತಂಡದ ಮಾಲೀಕರೇ ಕಾರಣ ಎಂದಿದ್ದಾರೆ.
2 ತವರು ಮೈದಾನಗಳು ಪಂಜಾಬ್ ಸೋಲಿಗೆ ಕಾರಣ
ವಾಸ್ತವವಾಗಿ ಐಪಿಎಲ್‌ನಲ್ಲಿ ಪ್ರತಿಯೊಂದು ತಂಡವೂ ಒಂದು ತವರು ಮೈದಾನವನ್ನು ಹೊಂದಿರುತ್ತವೆ. ಇದು ತಂಡಗಳು ತವರು ಮೈದಾನದ ಲಾಭ ಪಡೆದು ತಂತ್ರರೂಪಿಸಿ ಗೆಲುವು ಸಾಧಿಸಲು ನೆರವಾಗುತ್ತದೆ. ಆದರೆ ಪಂಜಾಬ್ ತಂಡ ಎರಡೆರಡು ಮೈದಾನಗಳನ್ನು ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಇದು ತಂಡದ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅಶ್ವಿನ್ ಕೂಡ ಇದನ್ನೇ ಹೇಳಿದ್ದಾರೆ.
ಅತ್ಯಂತ ಯಶಸ್ವಿ ಐಪಿಎಲ್ ತಂಡಗಳು ತಮ್ಮ ತವರು ಮೈದಾನಗಳನ್ನು ಎಂದಿಗೂ ಬದಲಾಯಿಸಿಲ್ಲ. ಆದರೆ ಪಂಜಾಬ್ ಎರಡು ಮೈದಾನಗಳಲ್ಲಿ ಪಂದ್ಯಗಳನ್ನು ಆಡುತ್ತದೆ.ಇದು ಅವರ ಗೆಲುವಿನ ಓಟಕ್ಕೆ ಅಡ್ಡಿಯಾಗಿದೆ. ಆಟಗಾರರು ಹೊಸ ಮೈದಾನಗಳಿಗೆ ಬೇಗನೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿಯೇ ಗೆಲುವಿನ ಸರಣಿಗೆ ಅಡ್ಡಿಯಾಗುತ್ತದೆ. ಹೀಗಾಗಿ ಪಂಜಾಬ್ ತಂಡದ ಮಾಲೀಕರು ಎರಡೆರಡು ಮೈದಾನಗಳನ್ನು ತವರು ಮೈದಾನವಾಗಿ ಆಯ್ಕೆ ಮಾಡಿರುವುದು ತಂಡಕ್ಕೆ ಕಂಟಕವಾಗುತ್ತಿದೆ ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.
ಕಾರಣ ವಿವರಿಸಿದ ಅಶ್ವಿನ್
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ‘ನನಗೊಂದು ಪ್ರಶ್ನೆ ಇದೆ. ಕೆಕೆಆರ್, ಮುಂಬೈ ಮತ್ತು ಸಿಎಸ್‌ಕೆ 19 ಸೀಸನ್‌ಗಳಲ್ಲಿ ಅತಿ ಹೆಚ್ಚು ಟ್ರೋಫಿಗಳನ್ನು ಗೆದ್ದ ತಂಡಗಳು. ಅವರು ಒಟ್ಟು 13 ಟ್ರೋಫಿಗಳನ್ನು ಗೆದ್ದಿದ್ದಾರೆ. ಎಸ್‌ಆರ್‌ಎಚ್ ಕೂಡ ಎರಡು (ಡೆಕ್ಕನ್ ಚಾರ್ಜರ್ಸ್ ಸೇರಿದಂತೆ) ಗೆದ್ದಿದೆ. ಈ ತಂಡಗಳು ಎಂದಾದರೂ ತಮ್ಮ ತವರು ನೆಲವನ್ನು ಬದಲಾಯಿಸಿದ್ದಾರೆಯೇ? ಹೊರಗಿನಿಂದ ನೋಡಿದರೆ ಪಂಜಾಬ್ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನೀವು ಭಾವಿಸಬಹುದು. ಆದರೆ ನಾನು ತಂಡದಲ್ಲಿದ್ದಾಗ ನನಗೂ ಇದೇ ಅನುಭವವಾಗಿದೆ. 2018 ರ ಆವೃತ್ತಿಯಲ್ಲಿ ನಾವು ಮೊಹಾಲಿಯಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದೆವು. ಆದರೆ ಆನಂತರ ಮೈದಾನವನ್ನು ಬದಲಾಯಿಸಿದ ಕಾರಣದಿಂದಾಗಿ ಸತತವಾಗಿ ಸೋತು ಟೂರ್ನಮೆಂಟ್‌ನಿಂದ ಹೊರಬಿದ್ದೆವು.
PBKS vs MI: ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಗೆದ್ದ ಬುಮ್ರಾ; ಪಂಜಾಬ್ಗೆ ಸತತ 5ನೇ ಸೋಲು
ಪಂಜಾಬ್ ಮುಲ್ಲನ್‌ಪುರದ ಜೊತೆಗೆ ಧರ್ಮಶಾಲಾವನ್ನು ತವರು ನೆಲವಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ ಧರ್ಮಶಾಲಾದಲ್ಲಿ ಪಂಜಾಬ್ಗೆ ಯಶಸ್ಸು ಸಿಗುತ್ತಿಲ್ಲ. ಅಲ್ಲಿನ ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ಉತ್ತಮವಾಗಿಲ್ಲ. ಹೀಗಾಗಿ ಮೊದಲ ಬ್ಯಾಟಿಂಗ್ ಮಾಡುವ ತಂಡಗಳಿಗೆ ಪಿಚ್ಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ಪಂಜಾಬ್ ಬ್ಯಾಟಿಂಗ್ ಮಾಡುವಾಗ 30-40 ರನ್‌ಗಳು ಕಡಿಮೆಯಾಗಿದೆ. ಏಕೆಂದರೆ ಅವರು ಇನ್ನೂ ಆ ಮೈದಾನದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ಅಶ್ವಿನ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:26 pm, Sat, 16 May 26
