IPL 2026: ಮುಂಬೈ ತಂಡಕ್ಕೆ ಆಘಾತ; ಸ್ಟಾರ್ ಆಲ್‌ರೌಂಡರ್ ಐಪಿಎಲ್‌ನಿಂದಲೇ ಔಟ್..! – Kannada News | IPL 2026: MI’s Playoff Hopes Dented as Mitchell Santner Ruled Out, Keshav Maharaj Joins

2026 ರ ಐಪಿಎಲ್‌ನಲ್ಲಿ (IPL2026) ಸತತ ಸೋಲುಗಳಿಂದ ಕಂಗೆಟ್ಟಿರುವ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ (Mumbai Indians) ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಮುಂಬೈ ತಂಡ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದರೆ, ಇದೀಗ ಇದರ ನಡುವೆ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಎಡ ಭುಜದ ಗಾಯದಿಂದಾಗಿ ನ್ಯೂಜಿಲೆಂಡ್ ಸ್ಪಿನ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಇಡೀ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

ಮಿಚೆಲ್ ಸ್ಯಾಂಟ್ನರ್ ಐಪಿಎಲ್​ನಿಂದ ಔಟ್

ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಸ್ಯಾಂಟ್ನರ್ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಮೈದಾನ ತೊರೆದು ಡಗೌಟ್ ಸೇರಿಕೊಂಡಿದ್ದರು. ಅಂದಿನಿಂದ ಸ್ಯಾಂಟ್ನರ್ ಗಾಯದ ಬಗ್ಗೆ ಆತಂಕ ಮನೆ ಮಾಡಿತ್ತು. ಇದೀಗ ಅದರಂತೆ ಸ್ಯಾಂಟ್ನರ್ ಗಾಯ ಗಂಭೀರವಾಗಿದ್ದು, ಅವರೀಗ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿ ಸ್ಯಾಂಟ್ನರ್ ಬದಲಿಯಾಗಿ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಮಿಚೆಲ್ ಸ್ಯಾಂಟ್ನರ್ ಮುಂಬೈ ಇಂಡಿಯನ್ಸ್‌ನ ಸ್ಪಿನ್ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದ ಸಮಯದಲ್ಲಿ, ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ ಶಾರ್ದೂಲ್ ಠಾಕೂರ್ ಅವರನ್ನು ಕನ್ಕ್ಯುಶನ್ ಬದಲಿ ಆಟಗಾರನಾಗಿ ಆಡಿಸಿತ್ತು.

ಬದಲಿಯಾಗಿ ಬಂದ ಮಹಾರಾಜ್

ಏತನ್ಮಧ್ಯೆ, ತಂಡವು ಈಗ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು 75 ಲಕ್ಷ ರೂ. ಗೆ ತಂಡಕ್ಕೆ ಸೇರಿಸಿಕೊಂಡಿದೆ. ಕೇಶವ್ ಮಹಾರಾಜ್​ಗೆ ಐಪಿಎಲ್‌ನಲ್ಲಿ ಆಡಿದ ಹೆಚ್ಚಿನ ಅನುಭವವಿಲ್ಲ. 2024 ರಲ್ಲಿ ರಾಜಸ್ಥಾನ್ ಪರ ಆಡಿದ್ದ ಮಹಾರಾಜ್​ಗೆ ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತ್ತು. ಈ ಬಾರಿಯ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಇದೀಗ ಸ್ಯಾಂಟ್ನರ್ ಗಾಯದಿಂದಾಗಿ ಮಹಾರಾಜ್​ಗೆ ಮುಂಬೈ ಪರ ಆಡುವ ಅವಕಾಶ ಸಿಕ್ಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *