IPL 2026: ಐಪಿಎಲ್ 2026ರ ಆರಂಭಿಕ ಪಂದ್ಯಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆರಂಭಿಕ ನಾಲ್ಕು ಪಂದ್ಯಗಳಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ. ಇತ್ತ ನಾಯಕತ್ವದ ರೇಸ್ನಲ್ಲಿ ಯುವ ದಾಂಡಿಗರಿಬ್ಬರು ಮುಂಚೂಣಿಯಲ್ಲಿರುವುದು ವಿಶೇಷ. ಅವರೆಂದರೆ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ.
ಇಶಾನ್ ಕಿಶನ್ ಈ ಹಿಂದೆ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ 2026 ರಲ್ಲಿ ಇಶಾನ್ ಕಿಶನ್ ನಾಯಕತ್ವದಲ್ಲಿ ಜಾರ್ಖಂಡ್ ತಂಡವು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಅಷ್ಟೇ ಅಲ್ಲದೆ 2016 ರ ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಫೈನಲ್ವರೆಗೆ ಮುನ್ನಡೆಸಿದ್ದ ಅನುಭವ ಕೂಡ ಇಶಾನ್ ಬೆನ್ನಿಗಿದೆ.
ಇತ್ತ ಅಭಿಷೇಕ್ ಶರ್ಮಾ ಕೂಡ ಈ ಹಿಂದೆ ನಾಯಕನಾಗಿ ಕಾಣಿಸಿಕೊಂಡಿದ್ದರು. 2016 ರಲ್ಲಿ ಅಭಿಷೇಕ್ ಮುಂದಾಳತ್ವದಲ್ಲಿ ಭಾರತ ತಂಡ ಯೂತ್ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇನ್ನು ವಿಜಯ್ ಹಝಾರೆ ಮತ್ತು ಇತರ ದೇಶೀಯ ಪಂದ್ಯಗಳಲ್ಲಿ ಪಂಜಾಬ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಹೀಗಾಗಿ ಇವರಿಬ್ಬರಲ್ಲಿ ಒಬ್ಬರಿಗೆ ಕ್ಯಾಪ್ಟನ್ ಪಟ್ಟ ನೀಡಲು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಚಿಂತಿಸಿದೆ. ಒಂದು ವೇಳೆ ಇಶಾನ್ ಕಿಶನ್ ಅವರನ್ನು ಹಂಗಾಮಿ ನಾಯಕನನ್ನಾಗಿ ಆಯ್ಕೆ ಮಾಡಿದರೆ, ಅಭಿಷೇಕ್ ಶರ್ಮಾ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇವರಿಬ್ಬರೂ ನಾಯಕತ್ವದಿಂದ ಹಿಂದೆ ಸರಿದರೆ ಮಾತ್ರ ಟ್ರಾವಿಸ್ ಹೆಡ್ಗೆ ಕ್ಯಾಪ್ಟನ್ ಪಟ್ಟ ಸಿಗಬಹುದು.
ಏಕೆಂದರೆ ಟ್ರಾವಿಸ್ ಹೆಡ್ ಈ ಹಿಂದೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ಉಪನಾಯಕತ್ವದ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ ನಾಯಕತ್ವದ ರೇಸ್ನಿಂದ ಹಿಂದೆ ಸರಿದರೆ ಮಾತ್ರ ಹೆಡ್ಗೆ ಕ್ಯಾಪ್ಟನ್ ಪಟ್ಟ ನೀಡುವ ಸಾಧ್ಯತೆಯಿದೆ.
