ಯುಜ್ವೇಂದ್ರ ಚಾಹಲ್ ಕೆಲವು ವರ್ಷಗಳ ಹಿಂದೆ ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದವರು. ಆದರೆ ಕಳಪೆ ಫಾರ್ಮ್ಗೆ ಸಿಲುಕಿದ ಚಾಹಲ್ಗೆ ಆ ಬಳಿಕ ಮತ್ತೊಂದು ಅವಕಾಶವೆನ್ನುವುದು ಸಿಗಲೇ ಇಲ್ಲ. ಪ್ರಸ್ತುತ ಐಪಿಎಲ್ನಲ್ಲಿ ಮಾತ್ರ ಆಡುತ್ತಿರುವ ಚಾಹಲ್, ಇದೀಗ ಆ ವೃತ್ತಿಜೀವನವನ್ನಾದರೂ ಉಳಿಸಿಕೊಳ್ಳುವ ಸಲುವಾಗಿ ಮಹಾತ್ಯಾಗವೊಂದನ್ನು ಮಾಡಿದ್ದಾರೆ.
ವೃತ್ತಿಜೀವನದಂತೆ ಯುಜ್ವೇಂದ್ರ ಚಾಹಲ್ ಅವರ ವೈಯಕ್ತಿಕ ಜೀವನವೂ ಹಳಿತಪ್ಪಿದೆ. ಹೀಗಾಗಿ ಮದ್ಯಪಾನದ ಹಿಂದೆ ಬಿದ್ದಿದ್ದ ಚಾಹಲ್ ಇದೀಗ ಅದಕ್ಕೆಲ್ಲ ಗುಡ್ ಬೈ ಹೇಳಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಚಾಹಲ್, ಐಪಿಎಲ್ ಆರಂಭಕ್ಕೂ ಮುನ್ನ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ಹಿಂದೆ ಐಪಿಎಲ್ನಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಯುಜ್ವೇಂದ್ರ ಚಾಹಲ್ ಆರ್ಸಿಬಿ ತಂಡದ ಪರ ಆಡಿದ್ದರು. ಇದೀಗ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಚಾಹಲ್ ನಾನು ಮದ್ಯಪಾನ ತ್ಯಜಿಸಿ 6 ತಿಂಗಳಿಗೂ ಹೆಚ್ಚು ಸಮಯವಾಗಿದೆ ಎಂದಿದ್ದಾರೆ. ಮದ್ಯಪಾನವನ್ನು ತ್ಯಜಿಸಿದ್ದು ಏಕೆ ಎಂತಲೂ ಚಾಹಲ್ ಬಹಿರಂಗಪಡಿಸಿದ್ದಾರೆ.
ಈ ವರ್ಷದ ಆರಂಭದಿಂದ ನಾನು ನನ್ನ ದೇಹದ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇನೆ. ನನಗೀಗ 35 ವರ್ಷ. ಹೀಗಾಗಿ ನಾನು ಹೆಚ್ಚು ಸಕ್ರಿಯವಾಗಿರಲು ಬಯಸುತ್ತೇನೆ ಮತ್ತು ತಂಡಕ್ಕಾಗಿ ನಾನು ಶೇಕಡಾ 150 ರಷ್ಟು ನೀಡಲು ಬಯಸುತ್ತೇನೆ. ಹಿರಿಯ ಆಟಗಾರನಾಗಿ, ಇತರರು ನನ್ನಿಂದ ಏನನ್ನಾದರೂ ಕಲಿಯಬಹುದು ಎಂಬ ಭಾವನೆ ಮೂಡಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿರುವ ಚಾಹಲ್, ಕಳೆದ ಬಾರಿ ಫೈನಲ್ನಲ್ಲಿ ಸೋತ ಬಗ್ಗೆಯೂ ಮಾತನಾಡಿದರು. ಮಾರ್ಕೊ ಯಾನ್ಸೆನ್ ಫೈನಲ್ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ಯಾನ್ಸೆನ್ ಫೈನಲ್ ಆಡಿದ್ದರೆ, ನಮ್ಮ ತಂಡ ಗೆಲ್ಲುತ್ತಿತ್ತು ಎಂದು ಚಾಹಲ್ ಹೇಳಿದ್ದಾರೆ.
