2026 ರ ಐಪಿಎಲ್ ಆರಂಭಕ್ಕೂ ಮುನ್ನವೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಕಳೆದ ಕೆಲವು ಆವೃತ್ತಿಗಳಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿರುವ ಸಿಎಸ್ಕೆ ಈ ಬಾರಿ ಉತ್ತಮ ತಂಡ ಕಟ್ಟಿಕೊಂಡು ಅಖಾಡಕ್ಕಿಳಿಯಲು ಸಜ್ಜಾಗಿತ್ತು. ಆದರೆ ಐಪಿಎಲ್ ಆರಂಭಕ್ಕೂ ಮುನ್ನವೇ ತಂಡದ ಸ್ಟಾರ್ ವೇಗಿ ಇಂಜುರಿಯಿಂದಾಗಿ ಇಡೀ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ.
ಸ್ಪೋರ್ಟ್ಸ್ಟಾರ್ ವರದಿಯ ಪ್ರಕಾರ, ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಅವರು ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಅಥವಾ ಪಂದ್ಯಾವಳಿ ನಂತರವೂ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಅವರು ಈ ಬಾರಿಯ ಐಪಿಎಲ್ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್ ಅವರನ್ನು ಉಲ್ಲೇಖಿಸಿ ಸ್ಪೋರ್ಟ್ಸ್ಟಾರ್ ವರದಿ ಮಾಡಿದೆ. ಎಲಿಸ್ ಅವರ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದಿರುವ ವಿಶ್ವನಾಥನ್, ಅವರ ಬದಲಿ ಆಟಗಾರನನ್ನು ಹುಡುಕಲು ಪ್ರಾರಂಭಿಸಿರುವುದಾಗಿಯೂ ತಿಳಿಸಿದ್ದಾರೆ.
ಈ ವರ್ಷದ ಆರಂಭದಿಂದಲೂ ಎಲಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಜನವರಿಯಲ್ಲಿ ನಡೆದ ಬಿಬಿಎಲ್ನಲ್ಲಿ ಗಾಯಕ್ಕೆ ತುತ್ತಾಗಿದ್ದ ಎಲಿಸ್, 2026 ರ ಟಿ20 ವಿಶ್ವಕಪ್ಗೆ ಫಿಟ್ ಆಗಿದ್ದರು. ಆಸ್ಟ್ರೇಲಿಯಾ ಪರ ನಾಲ್ಕು ಪಂದ್ಯಗಳನ್ನಾಡ ಐದು ವಿಕೆಟ್ಗಳನ್ನು ಕಬಳಿಸಿದ್ದರು. ಆದಾಗ್ಯೂ, ಇತ್ತೀಚೆಗೆ ಆಸ್ಟ್ರೇಲಿಯಾದ ದೇಶೀಯ ಏಕದಿನ ಪಂದ್ಯಾವಳಿಯ ಫೈನಲ್ನಲ್ಲಿ ಆಡಿದ್ದ ಎಲಿಸ್ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ.
2025 ರ ಮೆಗಾ ಹರಾಜಿನಲ್ಲಿ ಸಿಎಸ್ಕೆ 2 ಕೋಟಿ ರೂ ನೀಡು ನಾಥನ್ ಎಲಿಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಆದಾಗ್ಯೂ, ಕಳೆದ ಐಪಿಎಲ್ನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದ ಎಲಿಸ್ ಒಂದು ವಿಕೆಟ್ ಪಡೆದಿದ್ದರು. ಇದರ ಹೊರತಾಗಿಯೂ, ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿತ್ತು. ಆದರೀಗ ಅವರು ಸೀಸನ್ ಆರಂಭಕ್ಕೂ ಮುನ್ನವೇ ಮತ್ತೆ ಗಾಯಗೊಂಡಿದ್ದಾರೆ.
