IPL 2026 Final: ಫೈನಲ್ ಪಂದ್ಯದಲ್ಲಿ ವೇಗದ ಅರ್ಧಶತಕ ಬಾರಿಸಿದ ಕೊಹ್ಲಿ

ಐಪಿಎಲ್ 2026 ರ ಫೈನಲ್‌ನಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್​ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ತಂಡದ ಈ ಗೆಲುವಿನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕವೂ ಪ್ರಮುಖ ಪಾತ್ರವಹಿಸಿತು. ಗುಜರಾತ್ ನೀಡಿದ 156 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡುವ ಮೂಲಕ ತಂಡವನ್ನು ಕೇವಲ 3.3 ಓವರ್​ಗಳಲ್ಲಿಯೇ 50 ರನ್​ಗಳ ಗಡಿ ದಾಟಿಸಿದರು. ಹಾಗೆಯೇ ಕೇವಲ 25 ಎಸೆತಗಳಲ್ಲಿ ಕೊಹ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದು ಕೊಹ್ಲಿ ಅವರ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕವೂ ಆಗಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಈ ಐತಿಹಾಸಿಕ ಅರ್ಧಶತಕ ಸಿಡಿದಿದ್ದು ಸ್ಮರಣೀಯವಾಗಿತ್ತು.

ಈ ಹಿಂದೆ ಕೊಹ್ಲಿ 2018 ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 26 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ 25 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ತಮ್ಮ ಹಿಂದಿನ ದಾಖಲೆಯನ್ನು ಮುರಿದರು. ಬರೋಬ್ಬರಿ ಎಂಟು ವರ್ಷಗಳ ನಂತರ ಈ ಸಾಧನೆ ಮಾಡಿದ ಕೊಹ್ಲಿ, ಐಪಿಎಲ್ ಫೈನಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಸುರೇಶ್ ರೈನಾ, ಡೇವಿಡ್ ವಾರ್ನರ್ ಮತ್ತು ವೆಂಕಟೇಶ್ ಅಯ್ಯರ್ ಅವರ ಹೆಸರಿನಲ್ಲಿದೆ. ಈ ಮೂವರು ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಜಂಟಿಯಾಗಿ ಎರಡನೇ ಸ್ಥಾನದಲ್ಲಿರುವ ಕೊಹ್ಲಿ ಜೊತೆಗೆ, ರೋಹಿತ್ ಶರ್ಮಾ ಮತ್ತು ಕ್ರಿಸ್ ಗೇಲ್ ಕೂಡ ಫೈನಲ್‌ನಲ್ಲಿ ತಲಾ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.

Source link

Leave a Reply

Your email address will not be published. Required fields are marked *