IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಓಪನರ್ ಫಿಲ್ ಸಾಲ್ಟ್ ಅವರು ಗಾಯದ ಸಮಸ್ಯೆಯಿಂದಾಗಿ ಇಂದು(ಏ.30) ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಕಳೆದ ವಾರ ನಡೆದ ಅಭ್ಯಾಸದ ಅವಧಿಯಲ್ಲಿ ಫಿಲ್ ಸಾಲ್ಟ್ ಅವರಿಗೆ ಗಾಯವಾಗಿತ್ತು. ಈ ಕಾರಣದಿಂದ ಅವರು ಏಪ್ರಿಲ್ 24 ರಂದು ನಡೆದ ಗುಜರಾತ್ ಟೈಟಾನ್ಸ್ ಪಂದ್ಯದಿಂದ ಮತ್ತು ಏಪ್ರಿಲ್ 27 ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗೆ ಉಳಿದಿದ್ದರು.
ಇದಾಗ್ಯೂ ಇಂದಿನ ಪಂದ್ಯಕ್ಕೆ ಅವರು ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ವೈದ್ಯಕೀಯ ತಂಡವು ಅವರಿಗೆ ಇನ್ನೂ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದೆ. ಇದೇ ಕಾರಣದಿಂದಾಗಿ ಫಿಲ್ ಸಾಲ್ಟ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕಾಗಿ ಅಹಮದಾಬಾದ್ ಗೆ ಪ್ರಯಾಣಿಸಿಲ್ಲ ಎಂದು ಸ್ಪೋರ್ಟ್ಸ್ ತಕ್ ವರದಿ ಮಾಡಿದೆ. ಇದರೊಂದಿಗೆ ಇಂದಿನ ಮ್ಯಾಚ್ ನಲ್ಲೂ ಫಿಲ್ ಸಾಲ್ಟ್ ಕಣಕ್ಕಿಳಿಯುವುದಿಲ್ಲ ಎಂಬುದು ಖಚಿತವಾಗಿದೆ.
ಬದಲಿ ಆಟಗಾರ ಯಾರು?
ಫಿಲ್ ಸಾಲ್ಟ್ ಅವರ ಅನುಪಸ್ಥಿತಿಯಲ್ಲಿ, ಆರ್‌ಸಿಬಿ ತಂಡವು ಯುವ ಆಟಗಾರ ಜೇಕಬ್ ಬೆಥೆಲ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುತ್ತಿದೆ. ಹೀಗಾಗಿ ಇಂದಿನ ಮ್ಯಾಚ್ ನಲ್ಲೂ ವಿರಾಟ್ ಕೊಹ್ಲಿ ಜೊತೆ ಬೆಥೆಲ್ ಆರಂಭಿಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ತಂಡದ ಮೇಲೆ ಪ್ರಭಾವ:
ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಅದ್ಭುತ ಫಾರ್ಮ್‌ನಲ್ಲಿದ್ದರು. ಆಡಿದ ಮೊದಲ 6 ಪಂದ್ಯಗಳಲ್ಲಿ ಅವರು 202 ರನ್ ಗಳಿಸುವ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದರು. ಅವರು ಇಲ್ಲದಿರುವುದು ತಂಡದ ಬ್ಯಾಟಿಂಗ್ ಲೈನಪ್ ಮೇಲೆ ನೇರ ಪರಿಣಾಮ ಬೀರಿದೆ.
ಇದನ್ನೂ ಓದಿ: David Miller: ಕಿಲ್ಲರ್ ಮಿಲ್ಲರ್ ವಿಶ್ವ ದಾಖಲೆ
RCB ಮ್ಯಾನೇಜ್‌ಮೆಂಟ್ ಹೇಳುವುದೇನು?
RCBತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಸಾಲ್ಟ್ ಅವರ ಗಾಯವು ಗಂಭೀರವಾಗಿಲ್ಲದಿದ್ದರೂ, ಮುಂದಿನ ಪಂದ್ಯಗಳ ದೃಷ್ಟಿಯಿಂದ ತಂಡವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಫಿಲ್ ಸಾಲ್ಟ್ ಮುಂದಿನ ಪಂದ್ಯದಲ್ಲಿ ಅಥವಾ ಅದಾದ ಬಳಿಕ ಸಂಪೂರ್ಣ ಫಿಟ್ನೆಸ್ ನೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ RCB ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…
- ವಿರಾಟ್ ಕೊಹ್ಲಿ
- ಜೇಕಬ್ ಬೆಥೆಲ್
- ದೇವದತ್ ಪಡಿಕ್ಕಲ್
- ರಜತ್ ಪಾಟಿದಾರ್ (ನಾಯಕ)
- ಟಿಮ್ ಡೇವಿಡ್
- ಜಿತೇಶ್ ಶರ್ಮಾ
- ರೊಮಾರಿಯೊ ಶೆಫರ್ಡ್
- ಕೃನಾಲ್ ಪಾಂಡ್ಯ
- ಜೋಶ್ ಹೇಝಲ್ವುಡ್
- ಭುವನೇಶ್ವರ್ ಕುಮಾರ್
- ರಾಸಿಖ್ ದಾರ್
- ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್).
