ಐಪಿಎಲ್ 2027ರ ಮೆಗಾ ಟೂರ್ನಿಗೆ ಮುನ್ನವೇ ಫ್ರಾಂಚೈಸಿಗಳಿಗೆ ಭಾರಿ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ತ್ರಿಮೂರ್ತಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್ವುಡ್ ಮುಂಬರುವ ಐಪಿಎಲ್ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಜವಾಬ್ದಾರಿ ಹಾಗೂ ತೀವ್ರ ಕೆಲಸದ ಒತ್ತಡ ನಿರ್ವಹಣೆಯ ಕಾರಣದಿಂದಾಗಿ ಈ ಮೂವರೂ ಆಟಗಾರರು ಐಪಿಎಲ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿರುವ ಟ್ರಾವಿಸ್ ಹೆಡ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಕೂಡ ಐಪಿಎಲ್ನ ದ್ವಿತೀಯಾರ್ಧಕ್ಕೆ ಅಲಭ್ಯರಾಗಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ “ಮುಂದಿನ ವರ್ಷ ನಮ್ಮ ವೇಳಾಪಟ್ಟಿ ಅತ್ಯಂತ ಬ್ಯುಸಿಯಾಗಿದೆ. ದೇಶಕ್ಕಾಗಿ ಆಡುವ ಟೆಸ್ಟ್ ಪಂದ್ಯಗಳು ಅಥವಾ ಏಕದಿನ ವಿಶ್ವಕಪ್ ಅನ್ನು ನಾವು ಕೈಬಿಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಏನನ್ನಾದರೂ ಒಂದನ್ನು ತ್ಯಾಗ ಮಾಡಲೇಬೇಕಾಗುತ್ತದೆ,” ಎಂದು ಹೇಳುವ ಮೂಲಕ ಐಪಿಎಲ್‌ನಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.
ಹೊರಗುಳಿಯಲು ಕಾರಣವೇನು?
ಆಸ್ಟ್ರೇಲಿಯಾ ತಂಡವು 2027ರಲ್ಲಿ ಸತತವಾಗಿ ದೊಡ್ಡ ಸರಣಿಗಳನ್ನು ಆಡಬೇಕಾಗಿದೆ. ಇದೇ ಕಾರಣದಿಂದಾಗಿ ಆಟಗಾರರು ಐಪಿಎಲ್ ವೇಳೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
- ಜನವರಿ-ಫೆಬ್ರವರಿಯಲ್ಲಿ ಭಾರತದ ವಿರುದ್ಧ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ.
- ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧ 150ನೇ ವರ್ಷದ ಐತಿಹಾಸಿಕ ಟೆಸ್ಟ್ ಪಂದ್ಯವನ್ನಾಡಲಿದೆ.
- ಜೂನ್-ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಪ್ರತಿಷ್ಠಿತ 5 ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿ ನಡೆಯಲಿದೆ.
- ಆಸ್ಟ್ರೇಲಿಯಾ ಅರ್ಹತೆ ಪಡೆದರೆ 2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾಡಲಿದೆ.
- ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ನಲ್ಲೂ ಕಣಕ್ಕಿಳಿಯಬೇಕಿದೆ.
ಅಂದರೆ ಜನವರಿಯಿಂದ ಶುರುವಾಗುವ ಆಸ್ಟ್ರೇಲಿಯಾದ ವೇಳಾಪಟ್ಟಿ ನಿಲ್ಲುವುದು ನವೆಂಬರ್‌ನಲ್ಲಿ. ಅಂದರೆ ಇಲ್ಲಿ ಜನವರಿ-ಜುಲೈ ನಡುವೆ ಆಸ್ಟ್ರೇಲಿಯಾ 11 ಪ್ರತಿಷ್ಠಿತ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಇದರ ನಡುವೆ, ಅಂದರೆ ಮಾರ್ಚ್-ಮೇ ನಡುವೆ ಐಪಿಎಲ್ ನಡೆಯಲಿದೆ.
ಇತ್ತ ಮೇ ಅಂತ್ಯದಲ್ಲಿ ಐಪಿಎಲ್ ಮುಗಿಸಿ ಆಸ್ಟ್ರೇಲಿಯನ್ನರು ಜೂನ್ನಲ್ಲಿ ಟೆಸ್ಟ್ ಸರಣಿಗೆ ತೆರಳುವ ಸಾಧ್ಯತೆಯಿಲ್ಲ. ಹೀಗಾಗಿ ಪ್ಯಾಟ್ ಕಮಿನ್ಸ್, ಜೋಶ್ ಹೇಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ನಂತಹ ಪ್ರಮುಖ ವೇಗಿಗಳು ಐಪಿಎಲ್‌ನಿಂದ ಹಿಂದೆ ಸರಿಯುವುದು ಖಚಿತ.
ಇನ್ನು ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್ ಸೇರಿದಂತೆ ಕೆಲ ಆಟಗಾರರು ಐಪಿಎಲ್ನ ಮೊದಲಾರ್ಧದಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಂದರೆ ದ್ವಿತೀಯಾರ್ಧದ ಆರಂಭಕ್ಕೂ ಮುನ್ನ ಈ ಆಟಗಾರರು ಟೆಸ್ಟ್ ತಂಡವನ್ನು ಕೂಡಿಕೊಳ್ಳುವುದು ಖಚಿತ ಎಂದೇ ಹೇಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಸೀಸನ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರನ್ನು ನೆಚ್ಚಿಕೊಂಡಿರುವ ಫ್ರಾಂಚೈಸಿಗಳಿಗೆ ಅಕ್ಷರಶಃ ಅಗ್ನಿಪರೀಕ್ಷೆಯಾಗಲಿದೆ. ವಿಶ್ವಕಪ್ ಹಾಗೂ ಪ್ರತಿಷ್ಠಿತ ಆಶಸ್ ಸರಣಿಗಾಗಿ ದೇಶದ ಜವಾಬ್ದಾರಿಗೆ ಮೊದಲ ಆದ್ಯತೆ ನೀಡಿರುವ ಆಸೀಸ್ ಆಟಗಾರರ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ಡಿಕೆ
ಪ್ರಮುಖ ವೇಗಿಗಳ ಸಂಪೂರ್ಣ ಗೈರು ಒಂದೆಡೆಯಾದರೆ, ಟ್ರಾವಿಸ್ ಹೆಡ್ ಮತ್ತು ಕ್ಯಾಮರೋನ್ ಗ್ರೀನ್ ಅವರಂತಹ ಮ್ಯಾಚ್ ವಿನ್ನರ್‌ಗಳು ಟೂರ್ನಿಯ ದ್ವಿತೀಯಾರ್ಧದಲ್ಲಿ ಲಭ್ಯವಿರುವುದಿಲ್ಲ ಎಂಬುದು ತಂಡಗಳ ಪ್ಲೇ-ಆಫ್ಸ್ ರಣತಂತ್ರಕ್ಕೆ ದೊಡ್ಡ ಹಿನ್ನಡೆ ತರಲಿದೆ. ಹೀಗಾಗಿಯೇ ಮಿನಿ ಹರಾಜಿನಲ್ಲಿ ಸೂಕ್ತ ಬದಲಿ ಆಟಗಾರರನ್ನು ಹುಡುಕಿ, ಹೊಸ ರಣತಂತ್ರ ಹೆಣೆಯುವುದೇ ಈಗ ಐಪಿಎಲ್ ಫ್ರಾಂಚೈಸಿಗಳ ಮುಂದಿರುವ ಬಹುದೊಡ್ಡ ಸವಾಲು.
