Iran Israel War: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹುಗೆ ಪಿಎಂ ಮೋದಿ ಕರೆ: ಯುದ್ಧ ನಿಲ್ಲಿಸಲು ಆಗ್ರಹ – Kannada News | PM Modi Calls Israeli PM Benjamin Netanyahu, Urges Immediate End to War Amid Iran Missile Attacks

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು (ಸಂಗ್ರಹ ಚಿತ್ರ)Image Credit source: X/@narendramodi

ನವದೆಹಲಿ, ಮಾರ್ಚ್​ 2: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು (Benjamin Netanyahu) ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಕುರಿತು ಚರ್ಚಿಸಿದರು. ಇದೇ ವೇಳೆ, ಯುದ್ಧ ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಭಾರತ ಪುನರುಚ್ಚರಿಸಿರುವುದಾಗಿ ಮೋದಿ ತಿಳಿಸಿದ್ದಾರೆ. ಇಸ್ರೇಲ್‌, ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್‌ ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆ ಪ್ರಾದೇಶಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತದ ಕಳವಳಗಳನ್ನು ಬೆಂಜಮಿನ್ ನೆತ್ಯಾನಹುಗೆ ತಿಳಿಸಿದ್ದೇನೆ. ನಾಗರಿಕರ ಸುರಕ್ಷತೆ ಮೊದಲ ಆದ್ಯತೆಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದೇನೆ. ಯುದ್ಧವನ್ನು ಬೇಗನೆ ನಿಲ್ಲಿಸುವ ಅಗತ್ಯವನ್ನು ಭಾರತ ಪುನರುಚ್ಚರಿಸಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಎಕ್ಸ್ ಸಂದೇಶ

ಏತನ್ಮಧ್ಯೆ, ಇಸ್ರೇಲ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಇರಾನ್‌ ಪ್ರತೀಕಾರದ ದಾಳಿ ನಡೆಸಿದೆ. ರಾಜಧಾನಿ ಜೆರುಸಲೇಂ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಸ್ರೇಲ್‌ ಮೇಲಿನ ಪ್ರತೀಕಾರದ ದಾಳಿ ಮುಂದುವರಿದಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ.

ಮತ್ತೊಂದೆಡೆ, ಯುನೈಟೆಡ್ ಅರಬ್ ಎಮಿರೇಟ್ಸ್‌ (UAE) ರಾಷ್ಟ್ರಗಳ ಮೇಲೂ ಇರಾನ್‌ ಸೇನೆಯಿಂದ ದಾಳಿ ನಡೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟೆಹ್ರಾನ್​​ನನಲ್ಲಿ ಇರುವ ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಯುಎಇ ವಿದೇಶಾಂಗ ಸಚಿವಾಲಯ ಘೋಷಿಸಿದೆ. ಅಲ್ಲಿರುವ ರಾಯಭಾರಿ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ ಎಂದು ‘ಎಕ್ಸ್’ ಮೂಲಕ ತಿಳಿಸಿದೆ.

ದುಬೈ, ಅಬುಧಾಬಿ ಷೇರು ಮಾರುಕಟ್ಟೆ 2 ದಿನ ಬಂದ್

ಇರಾನ್‌ ದಾಳಿಯನ್ನು ಖಂಡಿಸಿರುವ ಯುಎಇ, ಭದ್ರತಾ ಕಾರಣಗಳಿಂದಾಗಿ ದುಬೈ ಹಾಗೂ ಅಬುಧಾಬಿ ಷೇರು ಮಾರುಕಟ್ಟೆಗಳನ್ನು ಎರಡು ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಜಾಗತಿಕ ಮಟ್ಟದಲ್ಲೂ ಆತಂಕ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಶಾಂತಿಯುತ ಮಾತುಕತೆಗೆ ಕರೆ ನೀಡಿದ ಭಾರತ

ಕಳೆದ ವಾರವಷ್ಟೇ ಪ್ರಧಾನಿ ಮೋದಿ ಇಸ್ರೇಲ್​ಗೆ 2 ದಿನಗಳ ಕಾಲ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇಸ್ರೇಲ್ ಹಾಗೂ ಭಾರತ ಮಧ್ಯೆ ಹಲವು ಒಪ್ಪಂದಗಳು ಏರ್ಪಟ್ಟಿದ್ದವು. ಇದೀಗ ಮತ್ತೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿ ಮೋದಿ ಮಾತನಾಡಿದ್ದಾರೆ. ಒಟ್ಟಿನಲ್ಲಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಎಲ್ಲಾ ದೇಶಗಳು ತಾಳ್ಮೆ ಪ್ರದರ್ಶಿಸಿ ಸಂವಾದದ ಮೂಲಕ ಸಮಸ್ಯೆ ಪರಿಹರಿಸಬೇಕು ಎಂಬುದು ಭಾರತದ ನಿಲುವು ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:33 am, Mon, 2 March 26

Source link

Leave a Reply

Your email address will not be published. Required fields are marked *