ISRO Recruitment 2026: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ! – Kannada News | VSSC ISRO Apprentice Recruitment 2026 27: 460 Vacancies, Walk in Interview for Engineers

Isro ಇಂಟರ್ನ್‌ಶಿಪ್‌ ಅವಕಾಶImage Credit source: Getty Images

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವ್ಯಾಪ್ತಿಗೆ ಒಳಪಡುವ ತಿರುವನಂತಪುರಂನ ಪ್ರತಿಷ್ಠಿತ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವು (VSSC) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುವರ್ಣಾವಕಾಶವನ್ನು ನೀಡಿದೆ. 2026-27ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 460 ಹುದ್ದೆಗಳನ್ನು ಈ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಲಾಗುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ ವಿವಿಧ ಪದವೀಧರರಿಗೆ ಇಸ್ರೋದಂತಹ ಹೆಮ್ಮೆಯ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಇದು ಅತ್ಯುತ್ತಮ ವೇದಿಕೆಯಾಗಿದೆ.

ಯಾವುದೇ ಆನ್‌ಲೈನ್ ಅರ್ಜಿ ಇಲ್ಲ, ನೇರ ವಾಕ್-ಇನ್ ಸಂದರ್ಶನ:

ಈ ನೇಮಕಾತಿಯ ಅತ್ಯಂತ ಪ್ರಮುಖ ವಿಶೇಷತೆಯೆಂದರೆ, ಅಭ್ಯರ್ಥಿಗಳು ಯಾವುದೇ ಮುಂಗಡ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ. ಬದಲಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನೇರವಾಗಿ ಜುಲೈ 25 ಶನಿವಾರದಂದು ನಡೆಯಲಿರುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬೇಕಾಗುತ್ತದೆ. ಅಂದು ಬೆಳಗ್ಗೆ 9:30 ರಿಂದ ಸಂಜೆ 5:00 ರವರೆಗೆ ಸಂದರ್ಶನ ಪ್ರಕ್ರಿಯೆಗಳು ನಡೆಯಲಿದ್ದು, ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕಾಗುತ್ತದೆ. 1 ವರ್ಷದ ಅವಧಿಯ ಈ ತರಬೇತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳು ಮತ್ತು ವಾಕ್-ಇನ್ ಸಂದರ್ಶನದ ಪ್ರದರ್ಶನದ ಆಧಾರದ ಮೇಲೆ ನೇರ ಆಯ್ಕೆ ಮಾಡಲಾಗುತ್ತದೆ.

ಇಲಾಖಾವಾರು ಹುದ್ದೆಗಳ ವಿವರ ಮತ್ತು ಮಾಸಿಕ ಸ್ಟೈಫಂಡ್:

ಪ್ರಸ್ತುತ ಬಿಡುಗಡೆಯಾಗಿರುವ ಅಧಿಸೂಚನೆಯ ಪ್ರಕಾರ, ಒಟ್ಟು 460 ಹುದ್ದೆಗಳಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಸಂಖ್ಯೆ 273 ಆಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 12,300 ರೂ. ಸ್ಟೈಫಂಡ್ (ಭತ್ಯೆ) ನೀಡಲಾಗುತ್ತದೆ. ಇನ್ನುಳಿದ 187 ಹುದ್ದೆಗಳನ್ನು ಟೆಕ್ನಿಷಿಯನ್ ಅಪ್ರೆಂಟಿಸ್ ವಿಭಾಗದಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇವರಿಗೆ ಮಾಸಿಕ 10,900ರೂ. ಸ್ಟೈಫಂಡ್ ಲಭ್ಯವಾಗಲಿದೆ. ಈ ತರಬೇತಿಯು ಅಭ್ಯರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದ ಉತ್ತಮ ಉದ್ಯೋಗಾವಕಾಶಗಳಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಹ ವಿಭಾಗಗಳು:

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಬಿಇ (BE) ಅಥವಾ ಬಿ.ಟೆಕ್ (B.Tech) ಪದವಿ ಮುಗಿಸಿರಬೇಕು. ಹೋಟೆಲ್ ಮ್ಯಾನೇಜ್‌ಮೆಂಟ್ ಅಥವಾ ಕ್ಯಾಟರಿಂಗ್ ಟೆಕ್ನಾಲಜಿಯಲ್ಲಿ ಪ್ರಥಮ ದರ್ಜೆ ಪದವಿ ಪಡೆದವರೂ ಸಹ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಮಾನ್ಯತೆ ಪಡೆದ ತಾಂತ್ರಿಕ ಮಂಡಳಿಯಿಂದ ಎಂಜಿನಿಯರಿಂಗ್ ಡಿಪ್ಲೊಮಾ (Diploma) ಉತ್ತೀರ್ಣರಾಗಿರಬೇಕು. ಏರೋನಾಟಿಕಲ್/ಏರೋಸ್ಪೇಸ್ ಎಂಜಿನಿಯರಿಂಗ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ; 253 ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿ!

ವಯೋಮಿತಿ ಮತ್ತು ಮೀಸಲಾತಿ ಸಡಿಲಿಕೆ:

ಜುಲೈ 31, 2026 ಕ್ಕೆ ಅನ್ವಯಿಸುವಂತೆ ಸಾಮಾನ್ಯ (UR) ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 28 ರಿಂದ ಗರಿಷ್ಠ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ (ಹುದ್ದೆಗಳಿಗೆ ಅನುಗುಣವಾಗಿ ಮಾರ್ಪಾಡಾಗುತ್ತದೆ). ಆದರೆ, ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದ್ದು, ಮೀಸಲು ವರ್ಗದ ಅಭ್ಯರ್ಥಿಗಳು 28 ರಿಂದ 35 ವರ್ಷಗಳವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ ಮತ್ತು ಪ್ರಮುಖ ಸೂಚನೆ:

ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳು ಹಾಗೂ ಸ್ವಯಂ ದೃಢೀಕರಿಸಿದ (Self-Attested) ಜೆರಾಕ್ಸ್ ಪ್ರತಿಗಳೊಂದಿಗೆ ಕೇರಳದ ತಿರುವನಂತಪುರಂ ಜಿಲ್ಲೆಯ ಮಣಕಾಡುವಿನಲ್ಲಿರುವ “ಕಾರ್ತಿಕ ತಿರುನಾಳ್ ಸರ್ಕಾರಿ ವೃತ್ತಿಪರ ಮತ್ತು ಪ್ರೌಢಶಾಲೆ (KTCT GVHSS – ಬಾಲಕಿಯರ ಶಾಲೆ), VSSC ಪೆವಿಲಿಯನ್” ವಿಳಾಸಕ್ಕೆ ಜುಲೈ 25 ರಂದು ಹಾಜರಾಗಬೇಕು. ಸಂದರ್ಶನದ ಸ್ಥಳದಲ್ಲೇ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಸ್ರೋ VSSC ಅಧಿಕೃತ ವೆಬ್‌ಸೈಟ್ ಆದ www.vssc.gov.in ಅನ್ನು ಪರಿಶೀಲಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

Leave a Reply

Your email address will not be published. Required fields are marked *