Jaspal Rana: ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ನಿಧನ, ಮನು ಭಾಕರ್​ಗೆ ಮಾರ್ಗದರ್ಶನ ನೀಡಿದ್ದ ಕೋಚ್ ಇನ್ನಿಲ್ಲ – Kannada News | Jaspal Rana Passesaway: India Mourns Legendary Shooting Coach and Dronacharya Awardee

ನವದೆಹಲಿ, ಜೂನ್ 12: ಭಾರತೀಯ ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಶೂಟರ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರ ಜಸ್ಪಾಲ್ ರಾಣಾ(49)(Jaspal Rana) ಅವರು ಕೊನೆಯುಸುರೆಳೆದಿದ್ದಾರೆ. ಆದರೆ, ಅವರು ಕ್ರೀಡಾಲೋಕಕ್ಕೆ ನೀಡಿರುವ ಮೂರು ದಶಕಗಳ ಅದ್ಭುತ ಕೊಡುಗೆ, ಒಲಿಂಪಿಕ್ ಪದಕ ವಿಜೇತರನ್ನು ರೂಪಿಸಿದ ಅವರ ಸಾಧನೆ ಮತ್ತು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅವರು ಬಿಟ್ಟು ಹೋಗಿರುವ ಅಮರ ಪರಂಪರೆ ಎಂದಿಗೂ ಸ್ಫೂರ್ತಿಯಾಗಿ ಉಳಿಯಲಿದೆ.

1990ರ ದಶಕದಲ್ಲಿ ಭಾರತದಲ್ಲಿ ಶೂಟಿಂಗ್ ಕ್ರೀಡೆಯು ಇನ್ನು ಜನಪ್ರಿಯವಾಗದ ಕಾಲದಲ್ಲೇ ಜಸ್ಪಾಲ್ ರಾಣಾ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ದೇಶದ ಗಮನ ಸೆಳೆದರು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದಲ್ಲಿ ಶೂಟಿಂಗ್ ಕ್ರೀಡೆಗೆ ಒಂದು ಹೊಸ ಮೆರುಗನ್ನು ತಂದುಕೊಟ್ಟರು. ಅಸಂಖ್ಯಾತ ಯುವಕರು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಇವರೇ ಮುಖ್ಯ ಸ್ಫೂರ್ತಿಯಾಗಿದ್ದರು.

ತಮ್ಮ ಯಶಸ್ವಿ ಕ್ರೀಡಾ ವೃತ್ತಿಜೀವನದ ನಂತರ ಜಸ್ಪಾಲ್ ರಾಣಾ ಅವರು ಯುವ ಪ್ರತಿಭೆಗಳನ್ನು ಗುರುತಿಸುವ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮನು ಭಾಕರ್ ಸೇರಿದಂತೆ ದೇಶದ ಹಲವು ಅತ್ಯುನ್ನತ ಪಿಸ್ತೂಲ್ ಶೂಟರ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್‌ಗಳನ್ನಾಗಿ ರೂಪಿಸಿದ ಕೀರ್ತಿ ಜಸ್ಪಾಲ್ ರಾಣಾ ಅವರಿಗೆ ಸಲ್ಲುತ್ತದೆ.

ಮತ್ತಷ್ಟು ಓದಿ: CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯರ ಈ ಐತಿಹಾಸಿಕ ಸಾಧನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

2012 ರಿಂದ ದೇಶದ ಜೂನಿಯರ್ ಪಿಸ್ತೂಲ್ ತಂಡದ ಜವಾಬ್ದಾರಿ ಹೊತ್ತು, ಭಾರತದ ಬೆಂಚ್ ಸ್ಟ್ರೆಂತ್ ಅನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠಗೊಳಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್  ವಿಶ್ವಕಪ್ ಮುಗಿಸಿ ಭಾರತಕ್ಕೆ ಮರಳುವ ವಿಮಾನ ಪ್ರಯಾಣದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರಾಣಾ ಅವರನ್ನು ನವದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 11ರ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಪರಿಷತ್ತು ದೃಢಪಡಿಸಿದೆ.

ಜಸ್ಪಾಲ್ ರಾಣಾ ಅವರ ದೈಹಿಕ ಅಗಲಿಕೆ ಭಾರತೀಯ ಕ್ರೀಡಾರಂಗಕ್ಕೆ ತುಂಬಲಾರದ ನಷ್ಟವಾದರೂ, ಅವರು ತರಬೇತಿ ನೀಡಿದ ನೂರಾರು ಕ್ರೀಡಾಪಟುಗಳು ಮುಂದಿನ ಒಲಿಂಪಿಕ್ಸ್ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿಯಲಿದ್ದಾರೆ. ಅವರು ಕ್ರೀಡೆಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಭಾರತೀಯ ಕ್ರೀಡಾಲೋಕವು ಅವರಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತಿದೆ.

ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:39 am, Fri, 12 June 26

Source link

Leave a Reply

Your email address will not be published. Required fields are marked *