
ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಜಿತೇಶ್ ಶರ್ಮಾ ಕಾಣಿಸಿಕೊಂಡಿರಲಿಲ್ಲ. ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ಭಾಗವಾಗಿದ್ದ ಜಿತೇಶ್ ಅವರನ್ನು ಏಕಾಏಕಿ ತಂಡದಿಂದ ಕೈ ಬಿಡಲಾಗಿತ್ತು. ಹೀಗೆ ತಂಡದಿಂದ ಕೈ ಬಿಟ್ಟಿದ್ದರ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಮನಬಿಚ್ಚಿ ಮಾತನಾಡಿದ್ದಾರೆ.
ಭಾರತ ತಂಡದಿಂದ, ಅದರಲ್ಲೂ ಟಿ20 ವಿಶ್ವಕಪ್ನಿಂದ ನನ್ನನ್ನು ಕೈ ಬಿಟ್ಟಿದ್ದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಏಕೆಂದರೆ ನನ್ನ ತಂದೆಗೆ ವಿಶ್ವಕಪ್ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್ ಶರ್ಮಾ, ಫೆಬ್ರವರಿ 1 ರಂದು ನನ್ನ ತಂದೆ ತೀರಿಕೊಂಡಿದ್ದಾರೆ. ನಾನು ತಂಡಕ್ಕೆ ಆಯ್ಕೆಯಾಗದ ಕಾರಣ, ನನಗೆ ತಂದೆಯ ಕೊನೆಯ ದಿನಗಳಲ್ಲಿ ಅವರ ಜೊತೆ ಇರಲು ಸಾಧ್ಯವಾಯಿತು. “ನನ್ನ ತಂದೆಗೆ ವಿಶ್ವಕಪ್ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು” ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.
ಆರಂಭದಲ್ಲಿ ತಂಡದಿಂದ ಹೊರಬಿದ್ದಾಗ ಬೇಸರವಾಗಿದ್ದರೂ, ತಂದೆಯ ಸಾವಿನ ನಂತರ ಆ ನೋವು ಮಾಯವಾಯಿತು. ಏಕೆಂದರೆ ಒಬ್ಬ ಮಗನಾಗಿ ಅವರ ಕೊನೆಯ ಕ್ಷಣಗಳಲ್ಲಿ ಅವರ ಜೊತೆಗಿದ್ದುದು ನನಗೆ ತೃಪ್ತಿ ತಂದಿದೆ. ಹಾಗಾಗಿ ವಿಶ್ವಕಪ್ ತಪ್ಪಿದ್ದಕ್ಕೆ ನನಗೆ ಈಗ ಯಾವುದೇ ವಿಷಾದವಿಲ್ಲ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ಜಿತೇಶ್ ಶರ್ಮಾ ಅವರ ತಂದೆ ಮೋಹನ್ ಶರ್ಮಾ ಅವರು ಸುದೀರ್ಘ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಕಳೆದ ತಿಂಗಳು ಒಂದನೇ ತಾರೀಖಿನಂದು ನಿಧನರಾಗಿದ್ದರು. ಆ ಸಮಯದಲ್ಲಿ ಟಿ20 ವಿಶ್ವಕಪ್ಗೆ ಭಾರತ ತಂಡದ ಆಯ್ಕೆ ನಡೆಯುತ್ತಿತ್ತು. ಜಿತೇಶ್ ಅವರು ತಂಡದಲ್ಲಿ ಸ್ಥಾನ ಪಡೆಯದಿದ್ದಾಗ ಆರಂಭದಲ್ಲಿ ನಿರಾಸೆಗೊಂಡಿದ್ದರು.
ಆದರೆ, ತಂದೆಯ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ, ಅವರು ತಂಡದಲ್ಲಿಲ್ಲದ ಕಾರಣದಿಂದಲೇ ತಮ್ಮ ತಂದೆಯ ಕೊನೆಯ 7 ದಿನಗಳ ಕಾಲ ಅವರ ಜೊತೆಗಿರಲು ಸಾಧ್ಯವಾಯಿತು ಎಂದು ಜಿತೇಶ್ ಶರ್ಮಾ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಇನ್ನು ತಂದೆಯ ನಿಧನದ ನಂತರ, ಮನೆಯ ಹಿರಿಯ ಮಗನಾಗಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ಜಿತೇಶ್ ಶರ್ಮಾ ತಿಳಿಸಿದ್ದಾರೆ. ಕ್ರಿಕೆಟ್ ಜೀವನದ ಏರಿಳಿತಗಳಿಗಿಂತ ಕುಟುಂಬದ ಸಾಮೀಪ್ಯ ದೊಡ್ಡದು ಎಂಬುದು ಅವರ ನಿಲುವು. ಇದೀಗ ಸಂಪೂರ್ಣ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಅವರೊಂದಿಗೆ ನಾನು ಸಮಯ ಕಳೆಯಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ್ ನೀಡಿದ ಎಚ್ಚರಿಕೆ..!
ಇದೀಗ ಆರ್ಸಿಬಿ ಕ್ಯಾಂಪ್ ಸೇರಿರುವ ಜಿತೇಶ್ ಶರ್ಮಾ ಮುಂಬರುವ ಐಪಿಎಲ್ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಐಪಿಎಲ್ 2026 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟ ಉಳಿಸಿಕೊಡುವ ಭರವಸೆ ನೀಡಿದ್ದಾರೆ.