ನವದೆಹಲಿ, ಜುಲೈ 30: ಪವಿತ್ರ ಶ್ರಾವಣ ಮಾಸದ ಅಂಗವಾಗಿ ವಾರ್ಷಿಕ ‘ಕನ್ವರ್ ಯಾತ್ರೆ’ ಗುರುವಾರ ಬೆಳಿಗ್ಗೆಯಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಶ್ರಾವಣ ಮಾಸದ ಆಗಮನದೊಂದಿಗೆ ಉತ್ತರ ಭಾರತದಲ್ಲಿ ವಾರ್ಷಿಕ ಪವಿತ್ರ ‘ಕನ್ವರ್ ಯಾತ್ರೆ’ಆರಂಭವಾಗಿದೆ. ಕೇಸರಿ ವಸ್ತ್ರಧಾರಿಗಳಾದ ಭಕ್ತರು ತಮ್ಮ ಹೆಗಲ ಮೇಲೆ ಬಿದಿರಿನ ‘ಕನ್ವರ್’ (ಕಲಶ) ಹೊತ್ತು, ಗಂಗಾಜಲ ತುಂಬಿಕೊಂಡು ಅಚಲ ನಂಬಿಕೆಯೊಂದಿಗೆ ತಮ್ಮ ಊರುಗಳತ್ತ ಸುದೀರ್ಘ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಈ ಯಾತ್ರೆಯು ಆಗಸ್ಟ್ 11, 2026 ರವರೆಗೆ ಮುಂದುವರೆಯಲಿದೆ.
ಕೋಟ್ಯಂತರ ಭಕ್ತರು ಹರಿದ್ವಾರಕ್ಕೆ ಆಗಮಿಸುವ ನಿರೀಕ್ಷೆಯಿರುವುದರಿಂದ ಉತ್ತರಾಖಂಡ ಪೊಲೀಸ್ ಹಾಗೂ ಆಡಳಿತ ಮಂಡಳಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಇಡೀ ಮೇಳ ಪ್ರದೇಶವನ್ನು 18 ಸೂಪರ್ ಝೋನ್, 40 ಝೋನ್ ಹಾಗೂ 141 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ. ಕನ್ವರ್ ಟ್ರ್ಯಾಕ್, ರಾಷ್ಟ್ರೀಯ ಹೆದ್ದಾರಿಗಳು, ದೇವಾಲಯಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 6,000 ಪೊಲೀಸರು ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಮಾರ್ಗಗಳಲ್ಲಿ ಸಿಸಿಟಿವಿ (CCTV) ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ 24 ಗಂಟೆಯೂ ಹೈಟೆಕ್ ಕಣ್ಣಿಡಲಾಗಿದೆ.
ಯಾತ್ರೆಯ ಹಿನ್ನೆಲೆಯಲ್ಲಿ ಮಾತನಾಡಿದ ಯೋಗ ಗುರು ಸ್ವಾಮಿ ರಾಮ್‌ದೇವ್, ಭಕ್ತರು ಸನ್ಮಾರ್ಗದಲ್ಲಿ ಯಾತ್ರೆ ನಡೆಸುವಂತೆ ಮನವಿ ಮಾಡಿದ್ದಾರೆ. ಶ್ರಾವಣ ಮಾಸವು ಅತ್ಯಂತ ಪವಿತ್ರವಾದದ್ದು. ಆದರೆ ಕೆಲವರು ಯಾತ್ರೆಯ ಸಮಯದಲ್ಲಿ ಮಾದಕ ದ್ರವ್ಯಗಳನ್ನು ಸೇವಿಸಿ ಗದ್ದಲ ಎಬ್ಬಿಸುತ್ತಾರೆ. ಇದು ಶಿವನಿಗೆ ಮತ್ತು ನಮ್ಮ ಸನಾತನ ಧರ್ಮಕ್ಕೆ ಮಾಡುವ ಅವಮಾನ. ಪ್ರತಿಯೊಬ್ಬ ಕನ್ವರಿಯ ಮುಖದಲ್ಲೂ ಶಿವನ ಭಕ್ತಿ ಇರಬೇಕೇ ಹೊರತು ಶಿಸ್ತು ಮೀರುವ ನಡವಳಿಕೆ ಇರಬಾರದು” ಎಂದು ಅವರು ಕರೆ ನೀಡಿದ್ದಾರೆ.
ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ ಹಾಗೂ ಬಿಹಾರದ ಪ್ರಮುಖ ಹೆದ್ದಾರಿಗಳಲ್ಲಿ ಕೇಸರಿ ವಸ್ತ್ರಧಾರಿಗಳಾದ ಲಕ್ಷಾಂತರ ಶಿವಭಕ್ತರು ‘ಕನ್ವರ್’ಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದು, ಮುಂದಿನ ಎರಡು ವಾರಗಳ ಕಾಲ ಈ ಭಾಗದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗಲಿವೆ.
ಶಿವಭಕ್ತರು ಹರಿದ್ವಾರ, ಗಂಗೋತ್ರಿ ಅಥವಾ ಸುಲ್ತಾನ್‌ಗಂಜ್‌ಗಳಿಗೆ ತೆರಳಿ ಪವಿತ್ರ ಗಂಗಾ ನದಿಯ ನೀರನ್ನು ‘ಕಲಶ’ಗಳಲ್ಲಿ ತುಂಬಿಸಿಕೊಳ್ಳುತ್ತಾರೆ. ಈ ಪಾತ್ರೆಗಳನ್ನು ಬಿದಿರಿನ ಕಂಬದ ಎರಡೂ ಬದಿಗಳಲ್ಲಿ ತೂಗುಹಾಕಿ, ನೆಲಕ್ಕೆ ತಾಗಿಸದಂತೆ ನೂರಾರು ಕಿಲೋಮೀಟರ್ ಬರಿಗಾಲಿನಲ್ಲಿ ನಡೆದು ತಮ್ಮ ಊರುಗಳ ಶಿವಲಿಂಗಕ್ಕೆ ಅರ್ಪಿಸುವುದು ಈ ವ್ರತದ ಕಠಿಣ ನಿಯಮವಾಗಿದೆ.
ಪ್ರಮುಖ ಸಂಚಾರ ಮಾರ್ಗಗಳು
ಹರಿದ್ವಾರದ ‘ಹರ್ ಕೀ ಪೌರಿ’ಯಿಂದ ಗಂಗಾಜಲ ಪಡೆದು ದೆಹಲಿ, ಪಶ್ಚಿಮ ಯುಪಿ, ಹರಿಯಾಣ ಮತ್ತು ರಾಜಸ್ಥಾನದತ್ತ ಸಾಗುವ ದೆಹಲಿ-ಹರಿದ್ವಾರ (NH-34) ಹೆದ್ದಾರಿ ಅತ್ಯಂತ ಜನನಿಬಿಡವಾಗಿರುತ್ತದೆ. ಬಿಹಾರದ ಸುಲ್ತಾನ್‌ಗಂಜ್‌ನಿಂದ ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ವೈದ್ಯನಾಥ ಧಾಮದವರೆಗೆ ಸುಮಾರು 105 ಕಿ.ಮೀ. ನಡೆದು ಸಾಗುವ ಮಾರ್ಗ. ಯಾತ್ರಿಕರ ಸುರಕ್ಷತೆಗಾಗಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಮುಖ್ಯ ರಸ್ತೆಗಳನ್ನು ಪಾದಚಾರಿಗಳಿಗಾಗಿ ಮೀಸಲಿಡಲಾಗಿದ್ದು, ಸರಕು ಸಾಗಣೆ ಟ್ರಕ್‌ಗಳನ್ನು ಪರ್ಯಾಯ ಮಾರ್ಗಗಳಿವೆ.
ನೀವು ಆಗಸ್ಟ್ ಮೊದಲ ವಾರದಲ್ಲಿ ಉತ್ತರಾಖಂಡ, ಋಷಿಕೇಶ ಅಥವಾ ಡೆಹ್ರಾಡೂನ್‌ಗೆ ರಸ್ತೆ ಪ್ರಯಾಣ ಯೋಜಿಸುತ್ತಿದ್ದರೆ ಭಾರಿ ವಿಳಂಬ ಎದುರಾಗಲಿದೆ.
ತುರ್ತು ಪ್ರಯಾಣವಿದ್ದರೆ ಕಾರುಗಳ ಬದಲಿಗೆ ರೈಲು ಅಥವಾ ವಿಮಾನದ ಸೇವೆ ಬಳಸುವುದು ಉತ್ತಮ.ರಸ್ತೆ ಸಂಚಾರವು ಆಗಸ್ಟ್ 13 ರ ನಂತರ ಸಂಪೂರ್ಣವಾಗಿ ಯಥಾಸ್ಥಿತಿಗೆ ಬರಲಿದೆ.
ಸಮಾಜ ಸೇವೆ ಮತ್ತು ಭದ್ರತೆ
ಹೆದ್ದಾರಿಯ ಉದ್ದಕ್ಕೂ ಸ್ಥಳೀಯ ಗ್ರಾಮಸ್ಥರು ಹಾಗೂ ಸ್ವಯಂಸೇವಕರು ಉಚಿತ ಊಟ, ಕುಡಿಯುವ ನೀರು ಮತ್ತು ವೈದ್ಯಕೀಯ ನೆರವು ನೀಡುವ ‘ಸೇವಾ ಶಿಬಿರಗಳನ್ನು’ (Sewa Camps) ತೆರೆದಿದ್ದಾರೆ. ಭದ್ರತೆಗಾಗಿ ಪೊಲೀಸರು ಡ್ರೋನ್, ತಾತ್ಕಾಲಿಕ ಸಿಸಿಟಿವಿ ಮತ್ತು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 12:00 pm, Thu, 30 July 26
