ಬೆಂಗಳೂರು, ಮೇ 2: ಕರ್ನಾಟಕವು ತೀವ್ರ ಬಿಸಿಲಿನ ಬೇಗೆಯಿಂದ ಬಳಲುತ್ತಿದೆ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಈ ರಣಬಿಸಿಲು ಪ್ರಾಣಿ, ಪಕ್ಷಿ ಹಾಗೂ ಮನುಷ್ಯರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕುಡಿಯುವ ನೀರಿಲ್ಲದೆ ಸಾವಿರಾರು ಪ್ರಾಣಿಗಳು ನರಳುತ್ತಿವೆ, ಹಲವು ಸಾಯುತ್ತಿವೆ. ಕೊಪ್ಪಳದಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ಹಸುಗಳು ಎಲುಬಾಗಿವೆ. ಗದಗ ಮತ್ತು ಇತರ ಪ್ರದೇಶಗಳಲ್ಲಿ ಕೆರೆಗಳು ಬತ್ತಿ ಹೋಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ರಾಯಚೂರಿನಲ್ಲಿ ತೀವ್ರ ಬಿಸಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಜಿಲ್ಲಾಡಳಿತವು ಹೃದ್ರೋಗ, ಕ್ಯಾನ್ಸರ್, ಬಿಪಿ, ಶುಗರ್ ಪೀಡಿತರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ಮಧ್ಯಾಹ್ನ 11 ರಿಂದ ಸಂಜೆ 4 ಗಂಟೆಯವರೆಗೆ ಹೊರಗೆ ಬಾರದಂತೆ ಜನರಿಗೆ ಸೂಚನೆ ನೀಡಲಾಗಿದೆ. ಈ ಬಿಸಿಲಿನಿಂದ ಪಾರಾಗಲು ಬೀದರ್‌ನಲ್ಲಿ ಏರ್ ಕೂಲರ್‌ಗಳು ಮತ್ತು ಬಾಗಲಕೋಟೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಜನರು ಆದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಆರೋಗ್ಯ ಇಲಾಖೆಯೂ ಸಲಹೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ